ಉಡುಪಿ : ಆರ್‌ಎಸ್‌ಎಸ್ ಸಾರ್ವಜನಿಕ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ಪ್ರಿಯಾಂಕ ಖರ್ಗೆ ಬರೆದ ಪತ್ರದ ವಿರುದ್ಧವಾಗಿ ಮಾಜಿ ಸಚಿವ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ನಿಷೇಧ ಹೇಳಿಕೆ ನಾಚಿಕೆ ಸಂಗತಿ. ಪ್ರಿಯಾಂಕ ಖರ್ಗೆ ಅವಿವೇಕಿತನದಿಂದ ಪತ್ರ ಬರೆದಿದ್ದಾರೆ. ಅವರ ತಂದೆ ಗೃಹಸಚಿವರಾಗಿದ್ದಾಗಲೇ ಆರ್‌ಎಸ್‌ಎಸ್ ವಿರುದ್ಧ ಏನೂ ಮಾಡಲು ಆಗಿಲ್ಲ. ಅಧಿಕಾರದ ಮದ ಮತ್ತು ಸೊಕ್ಕಿನಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಸುನಿಲ್ ಕುಮಾರ್ ಆರೋಪಿಸಿದರು.

ಅವರು ಮುಂದುವರೆದು, ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರಾಗಬಹುದು, ಆದರೆ ಪದೇ ಪದೇ ದುರಹಂಕಾರದಿಂದ ಮಾತನಾಡಬೇಡಿ. ಅದು ನಿಮ್ಮ ಬೆಳವಣಿಗೆಗೆ ಒಳ್ಳೆಯದಲ್ಲ. ನಿಮ್ಮ ಅಧಿಕಾರ ಶಾಶ್ವತ ಅಲ್ಲ, ಆದರೆ ಆರ್‌ಎಸ್‌ಎಸ್ ವಿಚಾರ ಶಾಶ್ವತ. ನೂರು ವರ್ಷಗಳಿಂದ ಜನರ ನಡುವೆ ಕೆಲಸ ಮಾಡಿದೆ, ಇನ್ನೂ ನೂರಾರು ವರ್ಷ ಮುಂದುವರಿಯಲಿದೆ. ನಮ್ಮಂತಹ ಲಕ್ಷಾಂತರ ಸ್ವಯಂಸೇವಕರು ಮುಂದಿನ ಪೀಳಿಗೆಯಲ್ಲೂ ಸಂಘ ಸೇವೆ ಮುಂದುವರಿಸುತ್ತಾರೆ. ಪ್ರಿಯಾಂಕ ಖರ್ಗೆಯ ಸಚಿವ ಕಾರ್ಯಪಟುತ್ವದ ಕುರಿತು ಟೀಕಿಸಿದ ಅವರು, ಎರಡು ವರ್ಷಕ್ಕೂ ಹೆಚ್ಚು ಇಲಾಖೆಯಲ್ಲಿ ಕೇವಲ ಕತ್ತೆ ಕಾದಿದ್ದೀರಿ. ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ ಬಂದಾಗ ನಾಪತ್ತೆಯಾಗಿದ್ದೀರಿ. ಈಗ ‘ನಾನು ಜೀವಂತ ಸಚಿವ ಎಂದು ತೋರಿಸಿಕೊಳ್ಳಲು ಹೇಳಿಕೆ ಕೊಡಬೇಡಿ ಎಂದು ಕಟು ಟೀಕೆ ಮಾಡಿದರು.

ರಾಜ್ಯ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಸುನಿಲ್ ಕುಮಾರ್, ಕರ್ನಾಟಕದಲ್ಲಿ ಕೆಟ್ಟ ಸರ್ಕಾರ ಇದೆ. ಮುಖ್ಯಮಂತ್ರಿ ಸಂಪುಟದಲ್ಲಿ ಹಿಡಿತ ಕಳೆದುಕೊಂಡಿದ್ದಾರೆ. ಯಾರು ಬೇಕಾದರೂ ಏನು ಬೇಕಾದರೂ ಮಾತನಾಡಬಹುದಾದ ಪರಿಸ್ಥಿತಿ ಇದೆ. ದಿನ ಬೆಳಗಾದರೆ ಯಾರು ಮುಖ್ಯಮಂತ್ರಿ, ಯಾರು ಸಚಿವ ಅನ್ನೋದು ಚರ್ಚೆಯಾಗುತ್ತಿದೆ. ಇದು 80 ಶೇಕಡಾ ಸರ್ಕಾರ . ಆರ್‌ಎಸ್‌ಎಸ್ ನಿಷೇಧ ಕುರಿತಾಗಿ ಸವಾಲು ಹಾಕಿದ ಅವರು, ತಾಕತ್ತಿದ್ದರೆ ಆರ್‌ಎಸ್‌ಎಸ್ ನಿಷೇಧ ಮಾಡಿ ಚುನಾವಣೆಗೆ ಬನ್ನಿ. ದೇಶಭಕ್ತ ಸಂಘಟನೆಯಾಗಿ ಆರ್‌ಎಸ್‌ಎಸ್ ವಿಶ್ವದ ಜನರ ಮನಸ್ಸು ಗೆದ್ದಿದೆ, ದೇಶಕ್ಕೆ ಕೊಡುಗೆ ನೀಡಿದೆ ಎಂದರು.

ಖರ್ಗೆಯ ಕಾರ್ಯಪದ್ಧತಿಯನ್ನು ಟೀಕಿಸಿ ಅವರು ಹೇಳಿದರು, ಆರ್‌ಎಸ್‌ಎಸ್ ಕುರಿತು ಟೀಕೆ ಮಾಡುವ ಮೂಲಕ ಪ್ರಿಯಾಂಕ ಖರ್ಗೆ ಜೀವಂತನೆಂದು ತೋರಿಸಲು ಯತ್ನಿಸುತ್ತಿದ್ದಾರೆ. ಸಚಿವರಾಗಿದ್ದ ಅವಧಿಯಲ್ಲಿ ಜನರ ಹಿತಕ್ಕೆ ಒಂದು ಕೆಲಸವೂ ಮಾಡಿಲ್ಲ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಹಾಳಾಗಿವೆ, ಗುಂಡಿಗಳು ತುಂಬಿವೆ, ಈ ವೈಫಲ್ಯಕ್ಕೆ ಖರ್ಗೆ ಕಾರಣ. ಒಂದು ಹೊರರಸ್ತೆಯೂ ಮಾಡಿಲ್ಲ, ಯಾವುದೇ ನಿವೇಶನ ಹಂಚಿಲ್ಲ, ಗ್ರಾಮ ಪಂಚಾಯಿತಿಗೆ ಅನುದಾನ ನೀಡಿಲ್ಲ, ಜಿಲ್ಲೆಯ ಪ್ರವಾಸಗಳನ್ನೂ ಮಾಡಿಲ್ಲ, ತಮ್ಮ ವೈಫಲ್ಯ ಮುಚ್ಚಿಹಾಕಲು ಮಾಧ್ಯಮದ ಮುಂದೆ ಮಾತನಾಡುವ ಚಟ ಪ್ರಿಯಾಂಕ ಖರ್ಗೆಗೆ ಬಂದಿದೆ ಎಂದರು.