ಮಣಿಪಾಲ: ಮಣಿಪಾಲ ಸಮೀಪದ ಹಿರಿಯಡಕ ಬಳಿ ಪೊಲೀಸ್ ರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಹಲ್ಲೆ ನಡೆಸಿ ಗುಂಡೇಟು ತಿಂದ ಆರೋಪಿ ಇಸಾಕ್ ನನ್ನು ಸರ್ಜರಿಗಾಗಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕಳೆದ ವಾರವಷ್ಟೆ ಪೊಲೀಸ್ ರ ಕೈಯಿಂದ ತಪ್ಪಿಸಿಕೊಂಡಿದ್ದ ಇಸಾಕ್ ಹಾಸನ ಜಿಲ್ಲೆಯಲ್ಲಿ ಉಳಿದ ಮೂವರು ಆರೋಪಿಗಳ ಜೊತೆ ಪತ್ತೆಯಾಗಿದ್ದ. ಹಾಸನದಿಂದ ಮಣಿಪಾಲಕ್ಕೆ ಕರೆ ತರುವ ವೇಳೆ ನಾಟಕವಾಡಿ ವಾಹನದಿಂದ ಇಳಿದು ಪೊಲೀಸ್ ರಿಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಇಸಾಕ್ ಮೇಲೆ ಮಣಿಪಾಲ ಪೊಲೀಸ್ ರು ಗುಂಡು ಹಾರಿಸಿ ಬಂಧಿಸಿದ್ದರು.
ಘಟನೆಯ ವೇಳೆ ಇಸಾಕ್ ಜೊತೆ ಇದ್ದ ಇತರ ಆರೋಪಿಗಳಾದ ರಾಹಿದ್(25), ಸಾಮಿಲ್ (26), ನಿಜಾಮುದ್ದೀನ್(26) ಇವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಿದೆ. ನಿನ್ನೆ ಘಟನೆ ನಡೆದ ಸ್ಥಳದಲ್ಲಿ ಸ್ಥಳ ಮಹಜರು ನಡೆಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.