ಉಡುಪಿ: ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಮಾ.12 ರಂದು ಮಣಿಪಾಲ ಠಾಣಾ ಪೋಲಿಸ್ ನಿರೀಕ್ಷಕ ದೇವರಾಜ್ ಅವರಿಂದ ಕಾಲಿಗೆ ಗುಂಡೇಟು ತಿಂದಿದ್ದ ಗರುಡ ಗ್ಯಾಂಗಿನ ಆರೋಪಿ ಇಸಾಕ್‌ನನ್ನು ಪೋಲಿಸರು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಎ.1 ರವರೆಗೆ ಒಟ್ಟು 9 ದಿನ ಪೋಲಿಸ್ ಕಸ್ಟಡಿಗೆ ನೀಡಿದೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಬೆಂಗಳೂರಿನ ನೆಲಮಂಗಲ ಪೋಲಿಸರಿಂದ ತಪ್ಪಿಸಿಕೊಳ್ಳುವ ವೇಳೆ ಸಾರ್ವಜನಿಕರ ಕಾರು, ಬೈಕ್‌ಗೆ ಗುದ್ದಿದ ಪ್ರಕರಣದಲ್ಲಿ ಆರೋಪಿಯನ್ನು ಹಾಸನದಲ್ಲಿ ಬಂಧಿಸಿ, ಮಣಿಪಾಲಕ್ಕೆ ಕರೆತರುತ್ತಿರುವಾಗ ವಾಂತಿ ಬರುತ್ತಿದೆ ಎಂದು ನೆಪವೊಡ್ಡಿ ಕಾರನ್ನು ನಿಲ್ಲಿಸಲು ಒತ್ತಾಯಿಸಿದ್ದನು. ಕಾರು ನಿಂತ ಬಳಿಕ ಪೋಲಿಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಮಣಿಪಾಲ ಪಿಐ ದೇವರಾಜ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದರು.
ನಂತರ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಯಲ್ಲಿ ಆರೋಪಿಯನ್ನು ದಾಖಲಿಸಲಾಗಿತ್ತು. ಬಳಿಕ ಶಸ್ತ್ರಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಪೋಲಿಸ್ ಕಸ್ಟಡಿಗೆ ಪಡೆದಿದ್ದಾರೆ.