ಕೋಟ: ಆನ್ಲೈನ್ ಬೆಟ್ಟಿಂಗ್ ಮೂಲಕ ಹೆಚ್ಚಿನ ಲಾಭದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಕೋಟ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶಿರಿಯಾರ ಗ್ರಾಮದ ಎತ್ತಿನಟ್ಟಿ ನಿವಾಸಿಗಳಾದ ರೂಪೇಶ್ (23), ಮನೋಜ್ (25), ಶಿರಿಯಾರ ಕೊಳ್ಕೆಬೈಲು ನಿವಾಸಿ ಸೃಜನ್ ಶೆಟ್ಟಿ (28), ಪಡುಮುಂಡು ನಿವಾಸಿ ರಾಘವೇಂದ್ರ (37) ಹಾಗೂ ಶಿರಿಯಾರ ಪೋಸ್ಟ್ ಆಫೀಸ್ ಸಮೀಪದ ನಿವಾಸಿ ಕುಶಲ (38) ಎಂದು ಗುರುತಿಸಲಾಗಿದೆ.

ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯೋರ್ವರಿಗೆ ಸುಮಾರು ಒಂದು ವರ್ಷದ ಹಿಂದೆ ಶಿರಿಯಾರ ನಿವಾಸಿ ಪ್ರದೀಪ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಆತ ಪಾರ್ಕರ್ ಎಂಬ ಅಪ್ಲಿಕೇಶನ್ ಮೂಲಕ ಆನ್ಲೈನ್ ಬೆಟ್ಟಿಂಗ್ ನಡೆಸುತ್ತಿದ್ದು, ಹೆಚ್ಚು ಲಾಭ ಗಳಿಸಬಹುದು ಎಂದು ಪ್ರಚೋದಿಸಿದ್ದಾನೆ ಎನ್ನಲಾಗಿದೆ. ಪ್ರದೀಪ್ ಪರಿಚಯಿಸಿದ ತಂಡದ ಸದಸ್ಯರು ವಾಟ್ಸಪ್ ಮೂಲಕ ಕಳುಹಿಸಿದ ಅಪ್ಲಿಕೇಶನ್ ಲಿಂಕ್, ಐಡಿ ಹಾಗೂ ಪಾಸ್ವರ್ಡ್ ಬಳಸಿ ದೂರುದಾರ ಬೆಟ್ಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಬೆಟ್ಟಿಂಗ್ಗೆ ಅಗತ್ಯವಿದ್ದ ಹಣವನ್ನು ಆರೋಪಿಗಳ ಸೂಚನೆಯಂತೆ ಫೋನ್ಪೇ ಮತ್ತು ಗೂಗಲ್ಪೇ ಮೂಲಕ ವಿವಿಧ ಖಾತೆಗಳಿಗೆ ಸುಮಾರು 25 ಲಕ್ಷ ರೂ. ಹಣವನ್ನು ಸಾಲವಾಗಿ ಹೂಡಿಕೆ ಮಾಡಿದ್ದರು. ಬೆಟ್ಟಿಂಗ್ನಲ್ಲಿ 15 ಲಕ್ಷ ರೂ. ಗೆದ್ದರೂ ಆ ಹಣವನ್ನು ಆರೋಪಿಗಳು ವಾಪಸ್ಸು ನೀಡದೆ ಮೋಸ ಮಾಡಿದ್ದಾರೆ ಎನ್ನಲಾಗಿದ್ದು, ಹಣ ವಾಪಸ್ಸು ಕೇಳಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಶಿರಿಯಾರ, ಸೈಬ್ರಕಟ್ಟೆ, ಹಳ್ಳಾಡಿ, ಕೋಟಾ, ಬ್ರಹ್ಮಾವರ ಹಾಗೂ ಕುಂದಾಪುರ ಸುತ್ತಮುತ್ತ ಆನ್ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದು, ಹಲವಾರು ಯುವಕರನ್ನು ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮವಾಗಿ ಸಂಪಾದಿಸಿದ ಹಣವನ್ನು ನಗದು ರೂಪದಲ್ಲಿ ಇತರರ ಹೆಸರಿನಲ್ಲಿ ಸೊಸೈಟಿಗಳಲ್ಲಿ ಠೇವಣಿ ಇಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



