ಉಡುಪಿ: ಆನ್ಲೈನ್ ಟ್ರೇಡಿಂಗ್ ಮುಖಾಂತರ ಉದ್ಯಾವರ ಪಿತ್ರೋಡಿ ನಿವಾಸಿ ಅಶೋಕ್ ಆರ್. ಅವರಿಗೆ 1,33,589 ರೂ. ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉದ್ಯಾವರ ಪಿತ್ರೋಡಿ ಜಾರುಕುದ್ರು ನಿವಾಸಿ ಸಾಲ್ಯಾನ್ ಅಶೋಕ್ ಆರ್. ಕಳೆದ ಮೂರು ವರ್ಷಗಳಿಂದ ಆನ್ಲೈನ್ ಟ್ರೇಡಿಂಗ್ ಸಂಬಂಧಿಸಿದ ವಾಟ್ಸ್ಆಪ್ ಗುಂಪಿನಲ್ಲಿ ಸಕ್ರಿಯರಾಗಿದ್ದು, ಆ ಗುಂಪಿನ ಮೂಲಕ ರಾಜ್ಕುಮಾರ್ ಎಂಬ ವ್ಯಕ್ತಿಯ ಪರಿಚಯ ಹೊಂದಿದ್ದರು. ಡಿಸೆಂಬರ್ 3ರಂದು ಅಶೋಕ್ ಅವರು ರಾಜ್ಕುಮಾರ್ಗೆ ಕರೆ ಮಾಡಿ, 1,501 ಯುಎಸ್ ಡಿ ಹಣವನ್ನು ಸಿಗುವಂತೆ ವಿನಂತಿಸಿದ್ದರು. ಪ್ರತಿಯಾಗಿ ಭಾರತೀಯ ಕರೆನ್ಸಿಯಲ್ಲಿ 1,33,589 ರೂಪಾಯಿ ಮೊತ್ತವನ್ನು ತನ್ನ ಎಚ್ಡಿಎಫ್ಸಿ ಬ್ಯಾಂಕ್ ಖಾತೆಗೆ ಜಮಾ ಮಾಡಲು ರಾಜ್ಕುಮಾರ್ ತಿಳಿಸಿದ್ದಾನೆ.

ಆರೋಪಿಯ ಮಾತಿನಂತೆ, ಅಶೋಕ್ ಆರ್. ಅವರು ತಮ್ಮ ಕರ್ನಾಟಕ ಬ್ಯಾಂಕ್ (ಕನ್ನರ್ ಪಾಡಿ ಶಾಖೆ) ಖಾತೆಯಿಂದ ಆರೋಪಿಯ ಸೂಚನೆಯಂತೆ 1,33,589 ರೂಪಾಯಿ ಹಣವನ್ನು ಜಮಾ ಮಾಡಿದ್ದಾರೆ. ಹೆಚ್ಚಿನ ಲಾಭಾಂಶ ಪಡೆಯುವ ಉದ್ದೇಶದಿಂದ ಆರೋಪಿಯ ಸಲಹೆಯಂತೆ ಆನ್ಲೈನ್ ಟ್ರೇಡಿಂಗ್ ಮೂಲಕ ಹೂಡಿಕೆ ಮಾಡಿದರೂ, ಜಮಾ ಮಾಡಿದ ಹಣವನ್ನಾಗಲಿ, 1,501 ಯುಎಸ್ ಡಿ ಮೊತ್ತವನ್ನಾಗಲಿ ನೀಡದೇ ಆರೋಪಿಯು ಮೋಸ ಮಾಡಿರುವುದು ಇದೀಗ ಬಯಲಾಗಿದೆ ಎಂದು ಅಶೋಕ್ ಆರ್. ಅವರು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



