ಉಡುಪಿ : ಉಡುಪಿ ನಗರದಲ್ಲಿ ಭಕ್ತಿಯ ಚಿಹ್ನೆಯಾದ ಹೂವುಗಳೇ ಈಗ ವಿವಾದದ ಕೇಂದ್ರಬಿಂದುವಾಗಿವೆ. ನಗರದ ಮಾರುತಿ ವೀಥಿಕಾದಲ್ಲಿ ಅಸುಚಿತ್ವದ ಸ್ಥಳದಲ್ಲಿ ಎಸೆದ ಹೂವುಗಳನ್ನು ಸಂಗ್ರಹಿಸಿ ಮರುಮಾರಾಟ ಮಾಡುತ್ತಿರುವ ಹೂವು ವ್ಯಾಪಾರಿಗಳ ತಂಡವೊಂದು ಪತ್ತೆಯಾಗಿದೆ. ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಸ್ಥಳಕ್ಕೆ ಧಾವಿಸಿ, ಅಶುದ್ಧ ಹೂವುಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ವ್ಯಾಪಾರ ನಿಲ್ಲಿಸಲು ಸೂಚಿಸಿದ್ದಾರೆ.

ದೀಪಾವಳಿ ಸಂದರ್ಭ ಮಳೆ ಹಿನ್ನಲೆಯಲ್ಲಿ ಹೂವು ಮಾರಾಟ ಕುಸಿತಗೊಂಡ ಬೇಸರದಲ್ಲಿ ಕೆಲ ವ್ಯಾಪಾರಿಗಳು ಮಾರಾಟವಾಗದ ಹೂವುಗಳನ್ನು ಸಾರ್ವಜನಿಕರು ಮೂತ್ರಬಾಧೆ ತೀರಿಸಿಕೊಳ್ಳುವ ಸ್ಥಳದಲ್ಲಿ ಎಸೆದು ಹೋಗಿದ್ದರು. ಅದೇ ಹೂವುಗಳನ್ನು ಮತ್ತೊಂದು ವ್ಯಾಪಾರಿ ತಂಡವು ಸಂಗ್ರಹಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಒಳಕಾಡುವರಿಗೆ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕಾಗಮಿಸುವ ವೇಳೆಗೆ ಕೆಲ ಗ್ರಾಹಕರು ಈಗಾಗಲೇ ಆ ಹೂವುಗಳನ್ನು ಖರೀದಿಸಿದ್ದರು ಎನ್ನಲಾಗಿದೆ.

ಹೊರ ಜಿಲ್ಲೆಗಳಿಂದ ಉಡುಪಿಗೆ ಬರುವ ಹೂವು ವ್ಯಾಪಾರಿಗಳು ಹಬ್ಬ-ಹರಿದಿನಗಳಲ್ಲಿ ತಾತ್ಕಾಲಿಕ ಅಂಗಡಿಗಳನ್ನು ತೆರಳಿ ವ್ಯಾಪಾರ ನಡೆಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಶುಚಿತ್ವದ ಸ್ಥಳದಿಂದ ಸಂಗ್ರಹಿಸಿದ ಹೂವುಗಳನ್ನು ಮಾರಾಟ ಮಾಡುವುದು ಉಡುಪಿ ನಾಗರಿಕರ ನಂಬಿಕೆಗೆ ಧಕ್ಕೆ ತರುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತಿಯ ನಾಮದಲ್ಲಿ ನಡೆಯುತ್ತಿರುವ ಇಂತಹ ಮೋಸ ವ್ಯಾಪಾರವನ್ನು ತಡೆಗಟ್ಟಲು ನಗರಸಭೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.