ಉಡುಪಿ: ಕುಡಿತದ ಅಮಲಿನಲ್ಲಿ ತಮ್ಮದೇ ಹಸುಗೂಸನ್ನು ಹಿಂಸಾತ್ಮಕವಾಗಿ ಎಳೆದಾಡುತ್ತಿದ್ದ ದಂಪತಿಗಳ ವಶದಿಂದ ಶಿಶುವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿದ ಘಟನೆ ಬುಧವಾರ ನಡೆದಿದೆ. ಅವರ ಸಮಯಪ್ರಜ್ಞೆಯಿಂದ ಅಪಾಯದ ಸ್ಥಿತಿಯಲ್ಲಿದ್ದ ಶಿಶು ಸುರಕ್ಷಿತವಾಗಿದೆ.

ಇಂದ್ರಾಳಿ ರೈಲು ನಿಲ್ದಾಣ ಸಂಪರ್ಕಿಸುವ ಜಾರ್ಜ್ ಫರ್ನಾಂಡಿಸ್ ರಸ್ತೆಯ ಬಳಿ ದಂಪತಿಗಳು ಹಸುಗೂಸನ್ನು ದುರ್ವ್ಯವಹಾರದಿಂದ ನಡೆಸಿಕೊಳ್ಳುತ್ತಿರುವುದನ್ನು ಗಮನಿಸಿದ ಶ್ವೇತಾ ಪೂಜಾರಿ ಅವರು ಸಾಮಾಜಿಕ ಕಾರ್ಯಕರ್ತರ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ತಂದಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಒಳಕಾಡು ಅವರು, ಮಗು ಮತ್ತು ಬಾಣಂತಿಯನ್ನು ಆಂಬುಲೆನ್ಸ್ ಮೂಲಕ ಉಡುಪಿಯ ತಾಯಿ-ಮಕ್ಕಳ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕಲ್ಪಿಸಿದರು. ಘಟನೆಯ ವಿವರವನ್ನು ನಗರ ಮಹಿಳಾ ಪೊಲೀಸ್ ಠಾಣೆ, ಸಖಿ ಕೇಂದ್ರ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ತಿಳಿಸಲಾಯಿತು. ಮಾಹಿತಿ ದೊರಕುತ್ತಿದ್ದಂತೆ ಸಂಬಂಧಿತ ಘಟಕದ ಸಿಬ್ಬಂದಿಗಳು ಆಸ್ಪತ್ರೆಗೆ ಬಂದು ಶಿಶು ಹಾಗೂ ತಾಯಿಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ನಂತರ ಕಾನೂನು ಕ್ರಮ ಕೈಗೊಂಡು ಪ್ರಕರಣವನ್ನು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನಕ್ಕೆ ಹಸ್ತಾಂತರಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಶಿಶುವನ್ನು ಲಕ್ಷ್ಮೀನಗರದ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಲಾಯಿತು. ತಾಯಿಗೆ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ.

ದಂಪತಿಗಳ ಹೆಸರು ಶೋಭಾ ಹಾಗೂ ರಾಜು ಎಂದು ತಿಳಿದುಬಂದಿದ್ದು, ಮಹಾರಾಷ್ಟ್ರದ ಕೊಲ್ಲಾಪುರ ಮೂಲದವರಾಗಿದ್ದಾರೆ. ಐದು ದಿನಗಳ ಹಿಂದೆ ಮಗುವಿನ ಹೆರಿಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ನಡೆದಿರುವುದು ಖಚಿತವಾಗಿದೆ. ಮಗುವಿನ ಮಾರಾಟಕ್ಕೆ ತಂದೆ ಯತ್ನಿಸಿದ್ದಾನೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿವೆ. ಘಟನೆಯ ನಂತರ ಆತ ಸ್ಥಳದಿಂದ ನಾಪತ್ತೆಯಾಗಿದ್ದಾನೆ. ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ, ಮಕ್ಕಳ ರಕ್ಷಣಾ ಘಟಕದ ರಮ್ಯ ಮತ್ತು ವಿದ್ಯಾ, ಸಖಿ ಕೇಂದ್ರದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



