ಉಡುಪಿ : ಅಂದಾಜು ಕೋಟಿ ರೂ. ರಸ್ತೆ ತೆರಿಗೆ ನಷ್ಟ ಉಂಟಾಗುವಂತೆ ವಿದೇಶದಿಂದ ಆಮದು ಮಾಡಿಸಿದ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರನ್ನು ಅಕ್ರಮವಾಗಿ ನೋಂದಣಿ ಮಾಡಲಾಗಿದೆ ಎಂಬ ವರದಿ ಹಿನ್ನೆಲೆಯಲ್ಲಿ, ಉಡುಪಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ನು ಆಧಾರ ಮಾಡಿಕೊಂಡು ಲೋಕಾಯುಕ್ತ ಪೊಲೀಸರು ಪ್ರಾಥಮಿಕ ಮಾಹಿತಿಗಳನ್ನು ಸಂಗ್ರಹಿಸಿ, ಉಡುಪಿ ಆರ್.ಟಿ.ಓ ಕಚೇರಿಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಸುಮಾರು 2 ಕೋಟಿ ರೂ. ಮೌಲ್ಯದ ಕಾರನ್ನು, ಅದರ ಕಡಿಮೆ ಬೆಲೆಯ ಮಾಡೆಲ್‌ನ ವಿವರಗಳನ್ನು ಎಡಿಟ್ ಮಾಡಿ, 2017ನೇ ಸಾಲಿನ ಕಾರಿನಂತೆ ತಿದ್ದುಪಡಿ ಮಾಡಿ ಫೆ. 2025ರಲ್ಲಿ ನೋಂದಣಿ ಮಾಡಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಉಡುಪಿ ಮತ್ತು ಮಂಗಳೂರಿನ ಆರ್‌ಟಿಓ ಕಚೇರಿಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ದಾಖಲಾತಿಗಳ ತಿದ್ದುಪಡಿ ಮೂಲಕ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ನಷ್ಟ ಉಂಟುಮಾಡಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ದೃಢಪಟ್ಟಿದೆ. ಲೋಕಾಯುಕ್ತ ಪೊಲೀಸರು ಮೇಲಾಧಿಕಾರಿಗಳ ಅನುಮತಿ ಪಡೆದು ನವೆಂಬರ್ 17 ರಂದು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಅಧಿಕಾರ ದುರ್ಬಳಕೆ ಮತ್ತು ದಾಖಲೆ ತಿದ್ದುಪಡಿ ಕಾಯ್ದೆಗಳಡಿ ಮುಂದಿನ ತನಿಖೆಗೆ ಹಸ್ತಾಂತರಿಸಲಾಗಿದೆ ಎಂದು ಉಡುಪಿ ಲೋಕಾಯುಕ್ತ ಪೊಲೀಸ್ ಕಛೇರಿ ಪ್ರಕಟಣೆ ತಿಳಿಸಿದೆ.



