ಉಡುಪಿ: ಉಡುಪಿ ನಗರದ ಅಂಬಲಪಾಡಿ ಕಾಳಿಕಾಂಬ ನಗರ ಸಮೀಪದ ಲೇಬರ್ ಕಾಲೋನಿಯಲ್ಲಿ ಅಣ್ಣ ತಂಗಿ ಮನೆಯ ಜಂತಿಗೆ ಚೂಡಿದಾರದ ವೇಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ವಲಸೆ ಕಾರ್ಮಿಕರ ಕುಟುಂಬದ ಕಾಲೇಜು ವಿದ್ಯಾರ್ಥಿನಿ ಪವಿತ್ರ (17) ಹಾಗೂ ವಲಸೆ ಕಾರ್ಮಿಕ ಮಲ್ಲೇಶ (23) ಎಂದು ಗುರುತಿಸಲಾಗಿದೆ.

ಮೃತ ಯುವತಿ ವಾಸವಾಗಿದ್ದ ಬಾಡಿಗೆ ಜೋಪಡಿಯಲ್ಲಿ ಯಾರೂ ಇಲ್ಲದ ಸಮಯವನ್ನು ಉಪಯೋಗಿಸಿಕೊಂಡು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ನಿವಾಸಿಗಳು ಘಟನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಮಾಜಸೇವಕ ನಿತ್ಯಾನಂದ ಒಳಕಾಡುವರು ಅವರ ಸಹಕಾರದೊಂದಿಗೆ, ಪೊಲೀಸರ ಸಮ್ಮುಖದಲ್ಲಿ ಇಬ್ಬರ ಶವಗಳನ್ನು ನೇಣು ಕುಣಿಕೆಯಿಂದ ತೆರವುಗೊಳಿಸಿ, ಅಂಬುಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಘಟಕಕ್ಕೆ ಸಾಗಿಸಲಾಯಿತು.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರೇಮ ಸಂಬಂಧದ ಹಿನ್ನೆಲೆ ಇರುವ ಸಾಧ್ಯತೆಯು ನಿರಾಕರಿಸಲಾಗಿಲ್ಲ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.