ಕಾರ್ಕಳ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆ ತರುವ ಸಂದರ್ಭ ಕಾರ್ಕಳದ ಹೊಸ್ಮಾರಿನಲ್ಲಿ ಅಡಿಷನಲ್ ಎಸ್ಪಿ ಅವರ ವಾಹನಕ್ಕೆ ತಿಮರೋಡಿ ಅವರ ಬೆಂಬಲಿಗರ ಕಾರು ಢಿಕ್ಕಿಯಾದ ಘಟನೆ ನಡೆದಿದೆ. ಈ ಕುರಿತುಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸೃಜನ್, ಹಿತೇಶ್ ಶೆಟ್ಟಿ, ಸುಜಿತ್ ಮಡಿವಾಳ ಎಂದು ಗುರುತಿಸಲಾಗಿದೆ. ಬ್ರಹ್ಮಾವರ ಪೊಲೀಸರು ಉಜಿರೆಯಲ್ಲಿರುವ ತಿಮರೋಡಿ ಮನೆಯಿಂದ ಮಹೇಶ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆದು ಬ್ರಹ್ಮಾವರಕ್ಕೆ ಕರೆ ತರುತ್ತಿದ್ದಾಗ, ಹಿಂದೆ ಬರುತ್ತಿದ್ದ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ಹಿನ್ನಲೆಯಲ್ಲಿ ಕರ್ತವ್ಯ ಲೋಪ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ.