ಉಡುಪಿ: ಕಳೆದು ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ ಮತ್ತು ಚಂಡಮಾರುತದ ಪ್ರಭಾವದಿಂದ ರಾಜ್ಯದ ಕರಾವಳಿ ಭಾಗದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಮುದ್ರ ತೀರದಲ್ಲಿ ಕಳೆದ ಐದು ದಿನಗಳಿಂದ ಬಲವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗಿಳಿಯದೆ ದಡದಲ್ಲೇ ನಿಂತಿದ್ದಾರೆ.
ಮಂಗಳೂರು, ಮಲ್ಪೆ, ಗಂಗೊಳ್ಳಿ, ಭಟ್ಕಳ, ಕಾರವಾರ, ಹೊನ್ನಾವರ ಹಾಗೂ ತದಡಿ ಬಂದರುಗಳಲ್ಲಿ ಪರ್ಸೀನ್, ಟ್ರಾಲ್ ಮತ್ತು ಸಣ್ಣ ಬೋಟುಗಳು ಲಂಗರು ಹಾಕಿದ ಸ್ಥಿತಿಯಲ್ಲಿವೆ. ನಾಡದೋಣಿಗಳೂ ಕೂಡ ಕಡಲಿಗಿಳಿಯದ ಕಾರಣ ಮೀನುಗಾರಿಕಾ ವಹಿವಾಟು ವಲಯದಲ್ಲಿ ಭಾರಿ ಹಿನ್ನಡೆ ಉಂಟಾಗಿದೆ.

ಸದ್ಯ ಮೀನುಗಾರಿಕೆ ಬಹುತೇಕ ಸ್ಥಗಿತವಾಗಿರುವ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಮೀನಿನ ಕೊರತೆ ಉಂಟಾಗಿದ್ದು, ಬೆಲೆಗಳು ಗಗನಕ್ಕೇರಿವೆ. ಮುಖ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಮುರುಮೀನು, ಬಂಗುಡೆ, ಪಾಂಫ್ರೆಟ್, ಡಿಸ್ಕೋ ಮೀನುಗಳ ಬೇಡಿಕೆ ಹೆಚ್ಚಿದ್ದು, ದರ ದುಪ್ಪಟ್ಟಾಗಿದೆ. ಇದರಿಂದ ಮೀನು ಖರೀದಿಗೆ ಗ್ರಾಹಕರು ಹಿಂದೇಟು ಹಾಕಿತ್ತಿದ್ದು, ಮೀನು ವ್ಯಾಪಾರವೇ ಕಷ್ಟ ಎನಿಸುವ ಸ್ಥಿತಿ ನಿರ್ಮಾಣವಾಗಿದೆ.

ಪ್ರಸ್ತುತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದರೂ ಗಾಳಿಯ ದಿಕ್ಕು ಈಗ ಬದಲಾಗಿದೆ ಹೀಗಾಗಿ ಎರಡು ಮೂರು ದಿನಗಳಲ್ಲಿ ಬೋಟುಗಳು ನಿಧಾನವಾಗಿ ಕಡಲಿಗಿಳಿಯಬಹುದು ಸಾದ್ಯತೆ ಹೆಚ್ಚಿದೆ. ಆದರೆ ಹವಾಮಾನ ಇಲಾಖೆಯ ಅಂದಾಜಿನಂತೆ ಚಂಡಮಾರುತದ ಲಕ್ಷಣಗಳು ಮುಂದುವರಿದಿದ್ದು, ಸಮುದ್ರ ಸಹಜ ಸ್ಥಿತಿಗೆ ತಲುಪಿದ ಬಳಿಕ ಮಾತ್ರ ಮೀನುಗಾರಿಕೆ ಮರು ಆರಂಭ ಮಾಡುವಂತೆ ಎಚ್ಚರಿಕೆ ನೀಡಿದೆ.

ಇನ್ನು ಹವಾಮಾನ ಬದಲಾವಣೆ ಚಂಡಮಾರುತದಿಂದಾಗಿ ಸಮುದ್ರದ ನೀರಿನಲ್ಲಾಗುವ ಬದಲಾವಣೆಯಿಂದಾಗಿ ಮೀನುಗಾರಿಕೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು. ಆದರೂ ಕೂಡ ಚಂಡಮಾರುತ ಭಯ ಮೀನುಗಾರರು ಸಮುದ್ರಕ್ಕೆ ಇಳಿಯಲು ಉತ್ಸಾಹ ಕಡಿಮೆ ಮಾಡುತ್ತಿದೆ. ಮುಂದೆ ಮೀನುಗಾರರು ಯಾವ ರೀತಿ ನಿರ್ಧಾರ ಕೈಗೊಂಡು ಮೀನುಗಾರಿಕೆ ನಡೆಸುತ್ತಾರೆ ಎನ್ನುವುದನ್ನು ಕೂಡ ಕಾದು ನೋಡಬೇಕಾದ ಸ್ಥಿತಿ ಸದ್ಯ ಕರಾವಳಿಯಲ್ಲಿದೆ.


