ಉಡುಪಿ : ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಸಮೀಪದಿಂದ ಕಿನ್ನಿಮೂಲ್ಕಿಗೆ ಹೋಗುವ ರಸ್ತೆಯಲ್ಲಿ ನಡುರಾತ್ರಿ ಭಾರೀ ಅಪಘಾತ ಸಂಭವಿಸಿದೆ.

ಗುರುವಾರ ರಾತ್ರಿ ಕಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಸರ್ವಿಸ್ ರೋಡ್‌ನಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವಾಗುವ ಪಾಯಿಂಟ್‌ನಲ್ಲಿ ರಸ್ತೆ ಅವ್ಯವಸ್ಥೆ ಕಾರಣದಿಂದ ಉರುಳಿ ಬಿದ್ದಿದೆ. ಪರಿಣಾಮವಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರು ಲಾರಿ ಅಡಿಯಲ್ಲಿ ಸಿಲುಕಿದ್ದು, ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಹೆದ್ದಾರಿಯಲ್ಲಿ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಸರ್ವಿಸ್ ರೋಡ್ ಮೂಲಕವೇ ಬೃಹತ್ ಗಾತ್ರದ ಲಾರಿಗಳು ಸಂಚಾರ ನಡೆಸುತ್ತಿವೆ, ಹೀಗಾಗಿ ರಾತ್ರಿ ವೇಳೆ ಗೊಂದಲಕ್ಕೂ ಕಾರಣವಾಗುತ್ತಿದೆ. ಅಪಘಾತದಿಂದಾಗಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು.

ಸರ್ವಿಸ್ ರೋಡ್ ಮತ್ತು ಹೆದ್ದಾರಿ ಸಂಪರ್ಕವಾಗುವ ಸ್ಥಳದಲ್ಲಿ ದೊಡ್ಡ ಗುಂಡಿಗಳು ಹಾಗೂ ಅಸಮತಟ್ಟಾದ ರಸ್ತೆ ಇದ್ದುದರಿಂದ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ಸಂಪರ್ಕ ರಸ್ತೆ ವ್ಯವಸ್ಥಿತವಾಗಿ ನಿರ್ವಹಣೆಗೊಳಪಡಿಸಬೇಕು ಎಂದು ನಾಗರಿಕರು ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸಿದ್ದಾರೆ.



