Friday, July 4, 2025

spot_img

ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಅಭಿನಂದನೆ

ಉಡುಪಿ: ಒಂದೇ ತರಗತಿಯ ಇಬ್ಬರು ಹೆಣ್ಣುಮಕ್ಕಳು ಜಪಾನ್‌ನ ಅಂತರಾಷ್ಟ್ರೀಯ ವೇದಿಕೆಗೆ ಆಯ್ಕೆಯಾಗಿರುವುದು ಲಿಂಗ ಸಮಾನತೆಯನ್ನು ಸಾಕಾರಗೊಳಿಸುವಲ್ಲಿ ದೇಶದ ನಾರಿ ಶಕ್ತಿಗೆ ದೊರಕಿರುವ ಅತ್ಯದ್ಭುತ ಪ್ರೇರಣೆಯಾಗಿದ್ದು, ಸರಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಇಂದು ನಗರದ ಮಣಿಪಾಲದ ರಜತಾದ್ರಿಯ ತಮ್ಮ ಕಚೇರಿಯಲ್ಲಿ, ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಸಚಿವಾಲಯವು ನಡೆಸುವ ಇನ್‌ಸ್ಪೈರ್ ಅವಾರ್ಡ್ ಸ್ಪರ್ಧೆಯ ರಾಷ್ಟ್ರಮಟ್ಟದ ವಿಭಾಗದಲ್ಲಿ ವಿಜೇತರಾಗಿ, ಜೂನ್ 15 ರಿಂದ 21 ರ ವರೆಗೆ ಜಪಾನ್‌ನಲ್ಲಿ ನಡೆಯುವ ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನಕ್ಕೆ ಆಯ್ಕೆಯಾದ ಜಿಲ್ಲೆಯ ಕಾರ್ಕಳ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಕುಕ್ಕುಜೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಾದ ಅಮೂಲ್ಯ ಹಾಗೂ ನಿಕಿತಾ ಅವರುಗಳಿಗೆ ಅಭಿನಂದನೆ ಸಲ್ಲಿಸಿ, ಮಾತನಾಡುತ್ತಿದ್ದರು.
ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಮಾಜ ಶಿಕ್ಷಕ ಸುರೇಶ್ ಮರಕಾಲ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದ ಫ್ಲಡ್ ಡಿಟೆಕ್ಟರ್ ಪೋಲ್ ಹಾಗೂ ರೋಪೋ ಮೀಟರ್ ಎಂಬ ಅನ್ವೇಷಣೆಗಳು ರಾಷ್ಟ್ರಮಟ್ಟದ ಇನ್‌ಸ್ಪೈರ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ಈ ಮೂಲಕ ಇನ್‌ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಒಂದೇ ತರಗತಿಯ ಇಬ್ಬರು ಹೆಣ್ಣುಮಕ್ಕಳು ಜಪಾನ್‌ನ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಗೊಂಡ ದೇಶದ ಮೊದಲ ಶಾಲೆ ಎಂಬ ಕೀರ್ತಿಗೆ ಕುಕ್ಕುಜೆ ಪ್ರೌಢಶಾಲೆ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ. ಅಶೋಕ ಕಾಮತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗರಾಜ ಕೆ, ಶಿಕ್ಷಕ ಸುರೇಶ್ ಮರಕಾಲ, ಅಮೂಲ್ಯ ಮತ್ತು ನಿಕಿತ ಇವರ ಪೋಷಕರು ಉಪಸ್ಥಿತರಿದ್ದರು. ದೇಶದ ಒಟ್ಟು 54 ವಿದ್ಯಾರ್ಥಿಗಳ ತಂಡದಲ್ಲಿ ಈ ಇಬ್ಬರು ಬಾಲಕಿಯರು ಜಪಾನ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles