ಉಡುಪಿ : ಕುಂದಾಪುರ ಕಸಬಾ ಗ್ರಾಮದ ಸಂತೆ ಮಾರುಕಟ್ಟೆ ಬಳಿ ಅಂಗಡಿ ಕೋಣೆ ಶಟರ್ ಮುರಿದು ಕಳ್ಳತನ ನಡೆಸಿದ ಮೂವರು ಕಳ್ಳರನ್ನು ಪೊಲೀಸ್ ರು ಬಂಧಿಸಿದ್ದಾರೆ. ಮಂಗಳೂರು ಮೂಲದ ಸರ್ಫ್ರಾಜ್( 33), ಜಾಕೀರ್ ಹುಸೈನ್(36) ಮೊಹಮ್ಮದ್ ಅಲ್ಫಾಝ್(26) ಬಂಧಿತ ಆರೋಪಿಗಳು. ಜುಲೈ 14ರಂದು ರಾತ್ರಿ ಕುಂದಾಪುರ ತಾಲೂಕು ಕಸಬಾ ಗ್ರಾಮದ ಸಂತೆ ಮಾರ್ಕೆಟ್ ಬಳಿ ಇರುವ 557/6 ನೇ ನಂಬ್ರದ ಅಂಗಡಿ ಕೋಣೆಯ ಶಟರ್ ನ ಬಾಗಿಲ ಬೀಗವನ್ನು ಒಡೆದು ಶಟರ್ನ್ನು ಮೇಲಕ್ಕೇತ್ತಿದ್ದಾರೆ. ಬಳಿಕ ಅಂಗಡಿ ಒಳಗೆ ಪ್ರವೇಶಿಸಿ, ಸುಮಾರು 95,000 ರೂಪಾಯಿ ಬೆಲೆಬಾಳುವ ತಾಮ್ರದ ವಯರ್ ಗಳನ್ನು ಹಾಗೂ ಹಿತ್ತಾಳೆಯ ವಸ್ತುಗಳನ್ನು ಕಳವು ಮಾಡಿದ್ದರು. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕುಂದಾಪುರ ಪೊಲೀಸ್ ರು ಪಿಎಸ್ಐ ನಂಜಾನಾಯ್ಕ್ ಎನ್ ನೇತೃತ್ವದಲ್ಲಿ ತಂಡ ರಚಿಸಿ, ಆರೋಪಿಗಳನ್ನು ಉಡುಪಿಯ ಸಂತೆಕಟ್ಟೆ ಯಲ್ಲಿ ಬೊಲೋರೋ ವಾಹನ ಸಹಿತ ಬಂಧಿಸಿದ್ದಾರೆ. ಕಳ್ಳತನ ಮಾಡಿದ ಆರೋಪಿಗಳಿಂದ ಸೊತ್ತು ಖರೀದಿ ಮಾಡಿದ ಹಿನ್ನಲೆಯಲ್ಲಿ ಮಂಗಳೂರು ಮೂಲದ ಮಹಮ್ಮದ್ ರಿಯಾಜ್(44) ನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ 35 ಸಾವಿರ ಮೌಲ್ಯದ 50 ಕೆಜಿ ತೂಕದ ತಾಮ್ರದ ಸರಿಗೆ, 23,800 ರೂಪಾಯಿ ಮೌಲ್ಯದ 34 ಕೆಜಿ ತೂಕದ ತಾಮ್ರದ ಸರಿಗೆ, 27,450 ಮೌಲ್ಯದ 61 ಕೆಜಿ ತೂಕದ ಹಿತ್ತಾಳೆಯ ವಸ್ತು, 3600 ರೂಪಾಯಿ ಮೌಲ್ಯದ 20 ಕೆಜಿ ತೂಕದ ಅಲ್ಯೂಮಿನಿಯಂ ವಸ್ತು, ಫ್ರಿಡ್ಜ್ ಎ ಸಿ ಕಂಪ್ರೆಸರ್, ಮೊಬೈಲ್ ಗಳು 45, ಮಾರುತಿ ಬಲೇನೋ ವಾಹನದ ವಶಕ್ಕೆ ಪಡೆಯಲಾಗಿದೆ.


