ಉಡುಪಿ : ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಬೇಕೆಂಬ ಆಗ್ರಹ ಮತ್ತೊಮ್ಮೆ ಗ್ರಾಮ ಸಭೆಯಲ್ಲಿ ಕೇಳಿಬಂದಿದೆ. ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಮೇಲ್ದರ್ಜೆಗೇರಿಸದ ಕಾರಣ ಸ್ಕ್ಯಾನಿಂಗ್ ಸೇವೆ ಸೇರಿದಂತೆ ಅನೇಕ ಅಗತ್ಯ ಸೌಲಭ್ಯಗಳು ಲಭ್ಯವಿಲ್ಲ ಎಂದು ಸಾಮಾಜಿಕ ಹೋರಾಟಗಾರ ನೀರೆ ಕೃಷ್ಣ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಹೆಬ್ರಿ ಸಮಾಜ ಮಂದಿರದಲ್ಲಿ ನಡೆದ ಗ್ರಾಮಸಭೆಯಲ್ಲಿ ಅವರು ಮಾತನಾಡಿ, ಬಡ ಜನರು ಕುಂದಾಪುರ, ಬ್ರಹ್ಮಾವರಕ್ಕೆ ಹೋಗಿ ವೈದ್ಯಕೀಯ ಚಿಕಿತ್ಸೆಗೆ ಹೆಚ್ಚುವರಿ ವೆಚ್ಚ ಮಾಡಬೇಕಾಗಿದೆ. ಆಸ್ಪತ್ರೆ ಮೇಲ್ದರ್ಜೆಗೇರಿಸಿದರೆ ಸ್ಥಳೀಯರಿಗೆ ಮಹತ್ವದ ಉಪಯೋಗವಾಗುತ್ತದೆ ಎಂದು ಹೇಳಿದರು. ಹೆಬ್ರಿಯಿಂದ ಕುಂದಾಪುರ–ಬ್ರಹ್ಮಾವರಕ್ಕೆ ಸಂಚರಿಸುವ ಬಸ್‌ಗಳು, ಆರ್‌ಟಿಒ ಆದೇಶವಿದ್ದರೂ, ತಾಲ್ಲೂಕು ಕಚೇರಿ ಮಾರ್ಗವಾಗಿ ಸಂಚರಿಸದೆ ನೇರವಾಗಿ ಪೇಟೆಗೆ ಬರುತ್ತಿರುವುದು ಬಡರಿಗೆ ಅನಾನುಕೂಲವಾಗಿದೆ ಎಂದು ಅವರು ಗಮನಕ್ಕೆ ತಂದರು.

ಹೆಬ್ರಿ ಪೊಲೀಸ್ ಠಾಣೆ ಕಾಡಿನೊಳಗೆ ಇರುವುದರಿಂದ, ಸಾರ್ವಜನಿಕರಿಗೆ ದೊಡ್ಡ ಅಸೌಕರ್ಯ ಉಂಟಾಗಿದೆ. ಬಡವರು ದೂರ ನಡೆದುಕೊಂಡು ಹೋಗಲೇಬೇಕಾಗಿ ಬರುತ್ತಿದೆ. ಪೊಲೀಸ್ ಔಟ್‌ಪೋಸ್ಟ್ ತೆರೆಯಬೇಕು. ಪೊಲೀಸ್ ಜನಸ್ಪಂದನ ಸಭೆಗಳನ್ನು ನಿಯಮಿತವಾಗಿ ನಡೆಸುವಂತೆ ಎಂದು ಗ್ರಾಮಸ್ಥ ನಿತೀಶ್ ಎಸ್.ಪಿ ಆಗ್ರಹಿಸಿದರು. ಹೆಬ್ರಿ ಪೋಸ್ಟ್ ಆಫೀಸ್‌ಕ್ಕಾಗಿ ಜಾಗ ಇದ್ದರೂ, ಇನ್ನೂ ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಹಿರಿಯರಿಗೆ ತೊಂದರೆ ಉಂಟಾಗಿದೆ ಎಂದು ನೀರೆ ಕೃಷ್ಣ ಶೆಟ್ಟಿ ಸಭೆಯ ಗಮನಕ್ಕೆ ತಂದರು.

ಹೆಬ್ರಿ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ, ಮಕ್ಕಳ ತಜ್ಞ, ಸ್ತ್ರೀರೋಗ ತಜ್ಞ ಹುದ್ದೆಗಳು ಖಾಲಿ ಇರುವುದರಿಂದ ದೂರದ ಊರುಗಳಿಗೆ ತೆರಳಿ ಚಿಕಿತ್ಸೆಗೆ ಹೋಗಬೇಕಾಗುತ್ತಿದೆ ಎಂದು ನಿತೀಶ್ ಎಸ್.ಪಿ ಹೇಳಿದರು. ಗ್ರಾಮಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದು, ಮಾದರಿ ಗ್ರಾಮಸಭೆ ಎಂದು ಗುರುತಿಸಲಾಯಿತು. ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ ಹೆಬ್ರಿ ವಲಯ ಅರಣ್ಯಾಧಿಕಾರಿ ಸಿದ್ದೇಶ್ ಭಾಗವಹಿಸಿದ್ದರು. ಪಂಚಾಯಿತಿ ಅಧ್ಯಕ್ಷ ತಾರನಾಥ ಎಸ್. ಬಂಗೇರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಪ್ರಿಯಾ, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಸಾದ್ ಶೆಟ್ಟಿ ನಿರೂಪಣೆ, ಪಿಡಿಒ ಸದಾಶಿವ ಸೇವಿಗಾರ್ ಸ್ವಾಗತ ಹಾಗೂ ಲೆಕ್ಕ ಸಹಾಯಕಿ ಪ್ರತಿಭಾ ಫಲಾನುಭವಿಗಳ ಪಟ್ಟಿಯನ್ನು ವಾಚಿಸಿದರು.


