ಉಡುಪಿ : ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ರಂಗಕರ್ಮಿ ಹಾಗೂ ನಟ ರಾಜು ತಾಳಿಕೋಟೆ ಅವರ ಆರೋಗ್ಯ ಏಕಾಏಕಿ ಗಂಭೀರಗೊಂಡು, ತೀವ್ರ ಹೃದಯಾಘಾತದಿಂದಾಗಿ ಅವರು ಮೃತಪಟ್ಟಿದ್ದರು. ಈ ಕುರಿತು ಅವರಿಗೆ ಚಿಕಿತ್ಸೆ ನೀಡಿರುವ ತಜ್ಞ ವೈದ್ಯ ಮಣಿಪಾಲ ಕೆಎಂಸಿ ಹೃದ್ರೋಗ ತಜ್ಞ ಡಾ. ಟಾಮ್ ದೇವಸ್ಯ ಆ ಕ್ಷಣದ ಕುರಿತು ಮಾತನಾಡಿದ್ದಾರೆ.

ರಾಜು ತಾಳಿಕೋಟೆಗೆ ದೊಡ್ಡ ಪ್ರಮಾಣದ ತೀವ್ರ ತರಹದ ಹೃದಯಾಘಾತವಾಗಿತ್ತು. ಅವರ ಹೃದಯವು ತುಂಬಾ ದುರ್ಬಲಗೊಂಡಿತ್ತು. ರಾತ್ರಿ ಮೂರು ಗಂಟೆಯ ಸುಮಾರಿಗೆ ತುರ್ತು ಆಂಜಿಯೋಪ್ಲಾಸ್ಟ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಬಳಿಕ ಬಲೂನ್ ಪಂಪ್ ಮತ್ತು ಕೃತಕ ಉಸಿರಾಟ (ವೆಂಟಿಲೇಟರ್) ಮೂಲಕ ಚಿಕಿತ್ಸೆ ನೀಡಲಾಯಿತು. ಅವರಲ್ಲಿ ಬಿಪಿ ಸಂಪೂರ್ಣವಾಗಿ ಕುಸಿತಗೊಂಡಿತ್ತು, ಜೊತೆಗೆ ಶುಗರ್, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಸಮಸ್ಯೆಗಳೂ ಇದ್ದವು.

ಶ್ವಾಸಕೋಶದಲ್ಲಿ ನೀರು ತುಂಬಿದ ಕಾರಣದಿಂದ ಉಸಿರಾಟದ ತೊಂದರೆ ಹೆಚ್ಚಾಗಿತ್ತು. ವೈದ್ಯಕೀಯ ತಂಡ ಹಲವಾರು ಗಂಟೆಗಳ ಕಾಲ ಪ್ರಯತ್ನಿಸಿದರೂ ದೇಹದಿಂದ ಯಾವುದೇ ಸ್ಪಂದನೆ ಬಂದಿರಲಿಲ್ಲ. ಚಿಕಿತ್ಸೆ ವೇಳೆ ಹಲವು ಬಾರಿ ಕಾರ್ಡಿಯಾಕ್ ಅರೆಸ್ಟ್ ಆಗುತ್ತಿತ್ತು. ನಂತರ ಕಿಡ್ನಿ ಫೇಲ್ಯರ್ ಲಕ್ಷಣಗಳು ಕೂಡ ಕಂಡುಬಂದವು. ಎಲ್ಲಾ ಪ್ರಯತ್ನಗಳ ನಡುವೆಯೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.