ಉಡುಪಿ : ಹಾಲಿನ ಅಂಗಡಿಯ ಮಾಡಿನ ತಗಡು ಒಡೆದು ಒಳನುಗ್ಗಿದ ಕಳ್ಳರು ಕ್ಯಾಶ್ ಡ್ರಾವರ್‌ನಲ್ಲಿದ್ದ ಸುಮಾರು 1.10 ಲಕ್ಷ ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಕುಂದಾಪುರದ ಬಸ್ರೂರು ಮೂರ್ಕೈನಲ್ಲಿ ನಡೆದಿದೆ.

ವಡೇರಹೋಬಳಿ ಗ್ರಾಮದ ನಿವಾಸಿ ಸುರೇಂದ್ರ ಅವರು ಬಸ್ರೂರು ಮೂರ್ಕೈನಲ್ಲಿ ನಂದಿನಿ ಹಾಲಿನ ಅಂಗಡಿ ನಡೆಸುತ್ತಿದ್ದು, ಸೆ.6ರಂದು ರಾತ್ರಿ 10.30ಕ್ಕೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಸೆ.7ರಂದು ಬೆಳಗ್ಗೆ 6 ಗಂಟೆಗೆ ಅಂಗಡಿ ತೆರೆದು ಒಳಗೆ ನೋಡಿದಾಗ, ಅಂಗಡಿಯ ಮೇಲ್ಛಾವಣಿಯ ತಗಡು ಒಡೆದಿರುವುದು ಹಾಗೂ ಕ್ಯಾಶ್ ಡ್ರಾವರ್‌ನಲ್ಲಿದ್ದ ಹಣ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಸೆ.6ರಂದು ರಾತ್ರಿ 10.30ರಿಂದ ಸೆ.7ರಂದು ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಅಂಗಡಿಯ ಮೇಲ್ಛಾವಣಿಯ ತಗಡನ್ನು ಒಡೆದು ಒಳನುಗ್ಗಿ 1,10,000 ನಗದು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


