ಉಡುಪಿ: ಗಣರಾಜ್ಯೋತ್ಸವದ ದಿನ ಸಾಸ್ತಾನದ ಟೋಲ್ ಪ್ಲಾಜಾದಲ್ಲಿ ಯುದ್ಧದಲ್ಲಿ ಗಾಯಗೊಂಡ ನಿವೃತ್ತ ಸೈನಿಕನಿಗೆ ಟೋಲ್ ವಿನಾಯಿತಿ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಸ್ತಾನದ ಟೋಲ್ ಮೂಲಕ ಪ್ರಯಾಣಿಸುತ್ತಿದ್ದ ನಿವೃತ್ತ ಸೈನಿಕ ಶ್ಯಾಮರಾಜ್ ಅವರಿಗೆ ಸಂಬಂಧಿಸಿದ ಅಧಿಕೃತ ಟೋಲ್ ವಿನಾಯಿತಿ ಪತ್ರವಿದ್ದರೂ, ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿದ್ದಾಗಿ ಆರೋಪಿಸಲಾಗಿದೆ. ದೇಶದ ಇತರ ಟೋಲ್ ಪ್ಲಾಜಾಗಳಲ್ಲಿ ವಿನಾಯಿತಿ ದೊರೆಯುತ್ತಿದ್ದರೂ, ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಮಾತ್ರ ನಿರಾಕರಣೆ ನಡೆದಿದೆ ಎಂದು ಶ್ಯಾಮರಾಜ್ ತಿಳಿಸಿದ್ದಾರೆ.

ಶ್ಯಾಮರಾಜ್ ಅವರು 21ನೇ ಪ್ಯಾರಾ ಸ್ಪೆಷಲ್ ಫೋರ್ಸ್‌ನ ಪ್ಯಾರಾಟ್ರೂಪರ್ ಆಗಿದ್ದು, ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಅವರ ಪತ್ನಿ ಮಿಲಿಟರಿ ನರ್ಸಿಂಗ್ ವಿಭಾಗದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಅವರ ಪೋಸ್ಟಿಂಗ್ ಸಂಬಂಧಿತ ಪ್ರಯಾಣದ ವೇಳೆ ಆರ್‌ಎಂಎ ನೀಡಿದ ಟೋಲ್ ವಿನಾಯಿತಿ ಪತ್ರವನ್ನು ತೋರಿಸಿದರೂ ವಿನಾಯಿತಿ ನೀಡಲಾಗಿಲ್ಲ ಎಂದು ದೂರಿದ್ದಾರೆ. ಆಪರೇಶನ್ ಪರಾಕ್ರಮ್ ಸಂದರ್ಭದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಗಿಸಿ ವಾಪಸ್ಸು ಬರುತ್ತಿದ್ದ ವೇಳೆ ಶ್ಯಾಮರಾಜ್ ಅವರ ವಾಹನ ಲ್ಯಾಂಡ್‌ಮೈನ್ ಸ್ಫೋಟಕ್ಕೆ ಒಳಗಾಗಿದ್ದು, ಈ ಘಟನೆಯಲ್ಲಿ 15 ಸೈನಿಕರು ಹುತಾತ್ಮರಾಗಿದ್ದರು. ಬದುಕುಳಿದ ಇಬ್ಬರಲ್ಲಿ ಶ್ಯಾಮರಾಜ್ ಕೂಡ ಒಬ್ಬರಾಗಿದ್ದು, ಗಂಭೀರ ಗಾಯಗಳಿಂದಾಗಿ ಅವರು ಸಂಪೂರ್ಣ ವಿಕಲಾಂಗರಾಗಿದ್ದಾರೆ.

ಘಟನೆ ಕುರಿತು ವಿಡಿಯೋ ವೈರಲ್ ಆದ ಬಳಿಕ ಟೋಲ್ ಸಿಬ್ಬಂದಿ ತಮ್ಮ ತಪ್ಪನ್ನು ಅರಿತು ಕ್ಷಮೆ ಯಾಚಿಸಿರುವುದಾಗಿ ತಿಳಿದುಬಂದಿದೆ. ಗಣರಾಜ್ಯೋತ್ಸವದ ದಿನ ನಡೆದ ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.



