ಉಡುಪಿ : ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ತೇಜಸ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂಘಟಿತ ಅಪರಾಧ ತಡೆ ಕಾಯಿದೆ ಕೋಕಾ (2000) ಅನ್ನು ಅನ್ವಯಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಏಳು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ, ಸುಜಿತ್, ಸುದೀಪ್, ಶ್ರೀಷಾ ಆನಂದ ಶೆಟ್ಟಿ, ಮಿಥುನ್, ಸುಹಾಸ್ ಮತ್ತು ಮನೋಜ್ ವಿ. ಕೊಟ್ಯಾನ್ ಬಂಧಿತರು.

ಸಿದ್ದಾಪುರ ಗ್ರಾಮದ ಮೋಹನ ದಾಸ್ ಶೆಟ್ಟಿ ಅವರ ಪುತ್ರ ತೇಜಸ್ನ್ನು ನವೆಂಬರ್ 19, 2025ರಂದು ಮಧ್ಯಾಹ್ನ ಸಾಸ್ತಾನದ ಕೋಸ್ಟಲ್ ಪ್ಯಾರಡೈಸ್ ಹೋಟೆಲ್ ಎದುರು ಅಪರಿಚಿತರು ಅಪಹರಿಸಿಕೊಂಡು ಹೋಗಿರುವುದು ತಿಳಿದುಬಂದಿದೆ. ಘಟನೆ ಕುರಿತು ತೇಜಸ್ನ ಸ್ನೇಹಿತ ಪ್ರಜ್ವಲ್ ಅವರಿಗೆ ವಾಟ್ಸಾಪ್ ಮೂಲಕ ಕರೆ ಬಂದಿದ್ದು, ಆರೋಪಿಗಳು ತೇಜಸ್ ತಮ್ಮ ವಶದಲ್ಲಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳು ಮೊದಲಿಗೆ 50 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ ಅದನ್ನು 3 ಕೋಟಿ ರೂಪಾಯಿಗೆ ಹೆಚ್ಚಿಸಿ, ಹಣ ನೀಡದಿದ್ದರೆ ತೇಜಸ್ನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ದೇವಿ ಪ್ರಸಾದ್ ಶೆಟ್ಟಿ, ಸುಜಿತ್, ಸುದೀಪ್, ಶ್ರೀಷಾ ಆನಂದ ಶೆಟ್ಟಿ, ಮಿಥುನ್, ಸುಹಾಸ್ ಮತ್ತು ಮನೋಜ್ ವಿ. ಕೊಟ್ಯಾನ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇದೇ ವೇಳೆ, ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ ಕೋಡಿಕೆರೆ (42) ಮತ್ತು ಚೇತನ್ ಪಡೀಲ್ (38) ಪರಾರಿಯಾಗಿದ್ದು, ಇವರ ಬಂಧನಕ್ಕಾಗಿ ಪೊಲೀಸ್ ಶೋಧ ಕಾರ್ಯ ಮುಂದುವರೆದಿದೆ. ಇವರ ವಿರುದ್ಧ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಪರಾರಿಯಾದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ. ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಕುಂದಾಪುರ ಉಪ ವಿಭಾಗದ ಡಿ.ವೈ.ಎಸ್.ಪಿ ಹೆಚ್.ಡಿ ಕುಲಕರ್ಣಿ ತಿಳಿಸಿದ್ದಾರೆ. ಸಾರ್ವಜನಿಕರು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಲು ಮನವಿ ಮಾಡಲಾಗಿದೆ.



