Tuesday, March 3, 2026

spot_img

ಸಾಲಿಗ್ರಾಮ ಪ. ಪಂಚಾಯತ್ ಮಾಜಿ ಅಧ್ಯಕ್ಷೆಗೆ ಅವಾಚ್ಯ ನಿಂದನೆ !? : ಸದನದ ಭಾವಿಗೆ ಇಳಿದು ಪ್ರತಿಭಟಿಸಿದ ಪ್ರತಿಪಕ್ಷದ ನಾಯಕ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆಯನ್ನು ಸಾರ್ವಜನಿಕವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಲಾಗಿದೆಯೇ ???  ಹೀಗಂತ ಸುದ್ದಿ ಸಾಲಿಗ್ರಾಮ ಪರಿಸರದಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಇದೇ ವಿಚಾರವಾಗಿ ಸಾಲಿಗ್ರಾಮ ಪಟ್ಟಣ ಸಾಮಾನ್ಯ ಸಭೆಯಲ್ಲಿ ದೊಡ್ಡ ವಾಗ್ವಾದ ನಡೆಯಿತು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಮಾಜಿ ಅಧ್ಯಕ್ಷೆ ಹಲ್ಲೆ ಯತ್ನ ವಿಚಾರ ಚರ್ಚೆ ನಡೆಯಿತು. ಪಟ್ಟಣಪಂಚಾಯತ್ ಪ್ರತಿಪಕ್ಷದ ನಾಯಕ ಶ್ರೀನಿವಾಸ ಅಮೀನ್ ಈ ವಿಚಾರವಾಗಿ ಸಭೆಯಲ್ಲಿ ಪ್ರಸ್ತಾಪಿಸಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಿಗೆ ಬೆಲೆ ಇಲ್ಲವೇ, ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆಯನ್ನು ನಿಂದಿಸಿ ಹಲ್ಲೆ ಯತ್ನಿಸಲಾಗಿದೆ ಎಂಬ ವಿಚಾರ ಕೇಳಿ ಬಂದಿದೆ. ಇದರ ಕುರಿತು ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ ಸಮರ ನಡೆಯಿತು. ಘಟನೆಯ ಕುರಿತು ಅಧ್ಯಕ್ಷರು ಅಥವಾ ಮುಖ್ಯಾಧಿಕಾರಿ ಸ್ಪಷ್ಟನೆ ನೀಡಬೇಕು, ಪಟ್ಟಣ ಪಂಚಾಯತ್ ಸದಸ್ಯರಾಗಿ ನಮ್ಮಗೆ ಬೆಲೆ ಇಲ್ಲವೇ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಿ ಹಕ್ಕುಚ್ಯುತಿ ಮಂಡಿಸುತ್ತಿದ್ದೇನೆ ಎಂದು ಶ್ರೀನಿವಾಸ ಅಮೀನ್ ಆಕ್ರೋಶ ವ್ಯಕ್ತಪಡಿಸಿದರು. 

 ಇದಕ್ಕೆ ಉತ್ತರಿಸಿದ ಆಡಳಿತ ಪಕ್ಷದ ರಾಜು ಪೂಜಾರಿ, ಈ ರೀತಿಯ ಯಾವುದೇ ಪ್ರಸಂಗಳು ನಡೆದಿಲ್ಲ. ನೀವು ಸುಮ್ಮನೆ ಏಕೆ  ಈ ರೀತಿ ಸಮಸ್ಯೆ ಸೃಷ್ಠಿಸುತ್ತಿದ್ದಿರಿ ಎಂದರು ಗರಂ ಆದರು. ಆಗ ಇದಕ್ಕೆ ಉತ್ತರಿಸಿದ ವಿಪಕ್ಷ ನಾಯಕ ಶ್ರೀನಿವಾಸ ಅಮೀನ್, ನನಗೆ ನಾನು ಆಯ್ಕೆಯಾಗಿ ಬಂದ ಪಕ್ಷದ ಸದಸ್ಯರ ಜೊತೆಗೆ, ಪಟ್ಟಣಪಂಚಾಯತ್ ಪ್ರತಿ ಸದಸ್ಯರ ವಿಚಾರದಲ್ಲಿ ಕಾಳಜಿ ಇದೆ. ಇಲ್ಲಿ ಪಕ್ಷದ ವಿಚಾರವಿಲ್ಲ, ಮುಂದಿನ ದಿನದಲ್ಲಿ ಈ ರೀತಿಯ ಪ್ರಸಂಗಗಳು ಉದ್ಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿ ಸಭೆಯ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

ಪ್ರತಿಪಕ್ಷದ ನಾಯಕರ ಹೋರಾಟ ಹಿನ್ನಲೆಯಲ್ಲಿ, ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ಸದಸ್ಯ ಶ್ಯಾಮಸುಂದರ್ ನಾಯರಿ, ಈ ರೀತಿಯಾದರೆ ಖಂಡನಾ ನಿರ್ಣಯ ಕೈಗೊಳ್ಳೋಣ ಎಂದರು. ಇದೇ ವಿಚಾರವಾಗಿ ವಾಗ್ವಾದ ಮುಂದುವರಿದಾಗ,ಮಾಜಿ ಅಧ್ಯಕ್ಷೆ, ಆಡಳಿತ ಪಕ್ಷದ ಸುಲತಾ ಹೆಗ್ಡೆ ಮಾತನಾಡಿ, ಘಟನೆ ನಡೆದದ್ದು ಸತ್ಯ. ಈ ಬಗ್ಗೆ ಅಧ್ಯಕ್ಷರ ಗಮನಕ್ಕಿದೆ ಕೌನ್ಸಿಲ್ ಸಮ್ಮುಖದಲ್ಲೆ ಈ ಪ್ರಕರಣ ನಡೆದಿದೆ, ಇದರ ಬಗ್ಗೆ ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿ ಮಾತುಕತೆ ನಡೆದು ಸಮಸ್ಯೆ ಬಗೆಹರಿಸಲಾಗಿದೆ. ಇದು ಯೋಜಿತವಾಗಿ ನಡೆದ ಕೆಲಸ, ಹಾಗಾಗಿ ಮುಂದೆ ಪಟ್ಟಣ ಪಂಚಾಯತ್ ಸದಸ್ಯರಿಗೆ ಭದ್ರತೆ ಬೇಕು, ಇದು ಮರುಕಳಿಸದಂತೆ ಪಟ್ಟಣಪಂಚಾಯತ್ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು. ಬಳಿಕ ಮುಖ್ಯಾಧಿಕಾರಿ ಅಜೇಯ ಭಂಡಾರ್ಕರ್ ಕೌನ್ಸಿಲರ್ ರಕ್ಷಣೆಯ ಬಗ್ಗೆ ಕಠಿಣ ಕ್ರಮಗಳನ್ನು ಸಭೆ ನಿರ್ಣಯದ ಮೂಲಕ ಕೈಗೊಳ್ಳಲಿದೆ ಎಂದರು.

ಇನ್ನು‌ ಸಭೆ ಮುಂದುವರಿದು, ಪಟ್ಟಣ ಪಂಚಾಯತ್ ಘನ ಹಾಗೂ ದ್ರವ ತ್ಯಾಜ್ಯ ಘಟಕ ಸ್ಥಳ ಖರೀದಿಯಲ್ಲಿ ಸದಸ್ಯರುಗಳು ಭಾಗಿಯಾಗಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿದೇ, ಹಿಂದಿನ ಆಡಳಿತ ಅಧಿಕಾರಿಗಳ ಅವಧಿಯಲ್ಲಿ ಈ ಸ್ಥಳ ಖರೀದಿಸಲಾಗಿತ್ತು. ಅತಿ ಹೆಚ್ಚು ದರ ನೀಡಿ ಖರೀದಿಸಲಾಗಿದೆ ಎನ್ನುವ ಹಿನ್ನಲೆಯಲ್ಲಿ ಈ ಪ್ರಕರಣ ಈಗಾಗಲೇ ಲೋಕಾಯುಕ್ತದಲ್ಲಿದೆ. ಪಾರದರ್ಶಕ ತನಿಖೆ ಅಗತ್ಯತೆ ಇದೇ ಎಂದು ಪ್ರತಿಪಕ್ಷದ ನಾಯಕ ಶ್ರೀನಿವಾಸ ಅಮೀನ್  ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಸೂಕ್ತ ತನಿಖೆ ನಡೆಸಲು ಮನವಿ ಮಾಡುವ ಕುರಿತು ಪತ್ರ ಬರೆಯಲಾಗುವುದು ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು. 

ಸಭೆಯಲ್ಲಿ ಸಾಲಿಗ್ರಾಮ ಒಳ ಪೇಟೆ ಅಗಲಿಕರಣ ವಿಚಾರ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಂಭಾಗವಿರುವ ಆಟೋ ನಿಲ್ದಾಣ ತೆರವು, ದಾರಿದೀಪ ಸಮರ್ಪಕತೆ,  ಬೀದಿ ನಾಯಿಗಳಿಗೆ ಕಡಿವಾಣ ಮೊದಲಾದ ವಿಚಾರವಾಗಿ ಚರ್ಚೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ, ಮೆಸ್ಕಾಂ, ಕಂದಾಯ ಇಲಾಖಾಧಿಕಾರಿ ಉಪಸ್ಥಿತರಿದ್ದರು. 

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles