ಉಡುಪಿ : ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ಗ್ರಾಮ ಪಂಚಾಯತ್‌ಗಳ ಮೂಲಕ ಜಿಲ್ಲಾ ಮಟ್ಟಕ್ಕೆ 19854 ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳ ಪೈಕಿ ರಾಜ್ಯ ಮಟ್ಟದಲ್ಲಿ 7909 ಅರ್ಜಿಗಳು ಪುರಸ್ಕೃತಗೊಂಡಿದೆ. ಪುರಸ್ಕೃತಗೊಂಡ ಅರ್ಜಿಗಳಲ್ಲಿ 6448 ಫಲಾನುಭವಿಗಳು ತರಬೇತಿಯನ್ನು ಪಡೆದುಕೊಂಡಿದ್ದು, 3495 ಫಲಾನುಭವಿಗಳಿಗೆ ಒಟ್ಟು 34 ಕೋಟಿ ರೂ. ಸಹಾಯಧನ ಬಿಡುಗಡೆಯಾಗಿದೆ ಎಂದು ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಪಿ.ಎಮ್ ವಿಶ್ವಕರ್ಮ ಮತ್ತು ಪಿ.ಎಮ್.ಇ.ಜಿ.ಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರಿಸುಮಾರು 1264 ಫಲಾನುಭವಿಗಳಿಗೆ ತರಬೇತಿ ಕಿಟ್ ವಿತರಣೆಯಾಗಿದ್ದು, ಇನ್ನು ಮುಂದಿನ ಹಂತದಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಅಂಚೆ ಕಚೇರಿಯ ಮೂಲಕ ತರಬೇತಿ ಕಿಟ್‌ಗಳನ್ನು ವಿತರಣೆ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು. ಇನ್ನು ಮುಂದೆ ವಿಶ್ವಕರ್ಮ ಯೋಜನೆಯ ಕಿಟ್‌ಗಳನ್ನು ಸ್ಥಳೀಯ ಶಾಸಕರು ಮತ್ತು ದಿಶಾ ಸಮಿತಿಯ ಸದಸ್ಯರ ಸಮಕ್ಷಮ ಅಂಚೆ ಕಚೇರಿಯಲ್ಲಿ ವಿತರಿಸುವಂತೆ ಸಂಸದ ಕೋಟ ಸಲಹೆ ಇತ್ತರು.

ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಅಂಚೆ ಇಲಾಖೆ ಅಧಿಕಾರಿ ಜೀವನ್ ಹಾಗೂ ದಿಶಾ ಸಮಿತಿ ಸದಸ್ಯರಾದ, ಮುರುಳಿಧರ ಕಡೆಕಾರ್, ಚಂದ್ರ ಪಂಚವಟಿ, ಶ್ರೀಮತಿ ವೀಣಾ ಎಸ್. ಶೆಟ್ಟಿ, ರಮೇಶ್ ಪೂಜಾರಿ ಯಳಜಿತ್, ಶ್ರೀಮತಿ ಪ್ರಿಯದರ್ಶಿನಿ ದೇವಾಡಿಗ, ಸಂತೆಕಟ್ಟೆ ನರಸಿಂಹ ನಾಯ್ಕ, ದೇವೇಂದ್ರ ಪ್ರಭು ಮಣಿಪಾಲ, ಶ್ರೀಮತಿ ಆಶಾ, ಇಡೂರು ಕುಂಜ್ಞಾಡಿ ಉಪಸ್ಥಿತರಿದ್ದರು.

2025-26 ನೇ ಸಾಲಿನಲ್ಲಿ ಪಿ.ಎಮ್.ಇ.ಜಿ.ಪಿ ಯೋಜನೆಯಡಿ 184 ಮಂದಿ ಅರ್ಜಿ ಸಲ್ಲಿಸಿದ್ದು, 6 ಕೋಟಿ ಸಹಾಯಧನ ಸಂಬಂಧಪಟ್ಟ ಬ್ಯಾಂಕುಗಳಿಗೆ ಮಂಜೂರಾಗಿದ್ದು, ಇಲ್ಲಿಯವರೆಗೆ 2022 ರಿಂದ 578 ಮಂದಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, 373 ಮಂದಿ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆಯಾಗಿದೆ.


