ಉಡುಪಿ: ಶೀರೂರು ಮಠದ ಪರ್ಯಾಯ ಮಹೋತ್ಸವದ ವಿಶೇಷ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಮಾಧ್ಯಮ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉಡುಪಿ ಶಾಸಕ ಹಾಗೂ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅವರು ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿದರು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಆನೆಗುಡ್ಡೆ ಕ್ಷೇತ್ರದ ಮೊಕ್ತೇಸರ ಶ್ರೀ ರಮಣ ಉಪಾಧ್ಯಾಯರು, ಶ್ರೀ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ಅನುಗ್ರಹದಿಂದ ಪರ್ಯಾಯ ಮಹೋತ್ಸವ ಸಾಂಗವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ ಹೆಗ್ಡೆ ಅವರು ಪುರಪ್ರವೇಶ ಮೆರವಣಿಗೆ ಸೇರಿದಂತೆ ಪರ್ಯಾಯದ ವಿವಿಧ ಕಾರ್ಯಕ್ರಮಗಳ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು. ಪುರಪ್ರವೇಶ ಮೆರವಣಿಗೆ ಸಂಚಾಲಕ ಗಣೇಶ್ ರಾವ್ ಮಾತನಾಡಿ, ಕಡಿಯಾಳಿಯಿಂದ ಆರಂಭಗೊಂಡ ಮೆರವಣಿಗೆ ಸಿಟಿ ಬಸ್ಸ್ಟ್ಯಾಂಡ್ ಮೂಲಕ ಕೃಷ್ಣ ಮಠ ತಲುಪಲಿದೆ. ಸುಮಾರು 1000ಕ್ಕೂ ಹೆಚ್ಚು ಭಜಕರು, ಸ್ಥಳೀಯ ಜಾನಪದ ತಂಡಗಳು ಹಾಗೂ ಅತಿಥಿಗಳು ಭಾಗವಹಿಸಲಿದ್ದಾರೆ ಎಂದರು.

ಹೊರೆಕಾಣಿಕೆ ಸಂಚಾಲಕ ಸುಪ್ರಸಾದ್ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಕಾರ್ಯದರ್ಶಿ ಮೋಹನ್ ಭಟ್, ಸಂಚಾಲಕರು ಹಾಗೂ ಸ್ವಾಗತ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶ್ವಥ್ ಭಾರಧ್ವಜ್ ನಿರೂಪಿಸಿದರು.



