ಉಡುಪಿ : ಕಾರ್ಕಳ ಶಾಸಕರ ಮನೆಗೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ ಹಟ್ಟಿಯಲ್ಲಿದ್ದ ಮೂರು ದನಗಳನ್ನು ಕದ್ದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಯೂನಿಸ್(31), ಮೊಹಮ್ಮದ್ ನಾಸೀರ್ (28), ಮೊಹಮ್ಮದ್ ಇಕ್ಬಾಲ್ (29) ಬಂದಿತಾ ಗೋ ಕಳ್ಳರು.

ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಜಯಶ್ರೀ ಎನ್ನುವವರ ಮನೆಗೆ ರಾತ್ರಿ ಸರಿಸುಮಾರು ಎರಡು ಗಂಟೆ ಹೊತ್ತಿಗೆ ನುಗ್ಗಿದ್ದ ಗೋ ಕಳ್ಳರು, ಹಸುಗಳನ್ನು ಕದಿಯುವ ವೇಳೆ ಶಬ್ದವಾದ ಹಿನ್ನೆಲೆಯಲ್ಲಿ ಮನೆಯವರು ಎಚ್ಚರಗೊಂಡಿದ್ದಾರೆ.

ಹಟ್ಟಿಯಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸಲು ಬಂದ ಮನೆಯವರಿಗೆ ತಲವಾರು ತೋರಿಸಿ 35,000 ರೂಪಾಯಿ ಬೆಲೆಯ ಮೂರು ಹಸುಗಳನ್ನು ವಾಹನಗಳಿಗೆ ತುಂಬಿಸಿಕೊಂಡು ಪರಾರಿಯಾಗಿದ್ದರು. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ್ದ 2 ತಲವಾರು, ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಮಹೀಂದ್ರಾ ಬೋಲೆರೋ ವಾಹನ, ಕೃತ್ಯದ ಸಮಯ ಪಯೋಗಿಸಿದ್ದ 5 ಮೊಬೈಲ್ ಫೋನ್ ಗಳು ಸೇರಿದಂತೆ ಒಟ್ಟು 5,87,000 ರೂಪಾಯಿ ಮೌಲ್ಯದ ಸೊತ್ತು ವಶಕ್ಕೆ ಪಡೆದಿದ್ದಾರೆ.
