ಬ್ರಹ್ಮಾವರ: ನೀಲಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಶ್ವಕೀರ್ತಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಂದುವರಿಸುವ ಬಗ್ಗೆ ರಚಿಸಲಾದ ನಿರ್ವಹಣಾ ಸಮಿತಿಯ ಪ್ರಥಮ ಸಭೆಯು ಸಮಿತಿಯ ಅಧ್ಯಕ್ಷರಾದ ಸುಬ್ರಮಣ್ಯ ಬಾಸ್ರಿ ಅವರ ಅಧ್ಯಕ್ಷತೆಯಲ್ಲಿ ಇಂದು ಜರುಗಿತು. ಹೊಸ ಉತ್ಸಾಹದೊಂದಿಗೆ ಶತಮಾನದ ಇತಿಹಾಸವಿರುವ ಶಾಲೆಯನ್ನು ಮುನ್ನಡೆಸಿಕೊಂಡು ಹೋಗಲು ನವನವೀನ ಚಿಂತನೆ ಯೋಜನೆಗಳು ಸಭೆಯಲ್ಲಿ ವ್ಯಕ್ತವಾಯಿತು.
ಪ್ರಸ್ತುತ ಒಂದನೇ ತರಗತಿಗೆ ದಾಖಲಾತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಲು ಗಂಭೀರವಾಗಿ ನಿರ್ಣರಿಸಲಾಯಿತು. ಶಾಲೆಯ ಮುಂದಿನ ನಿರ್ವಹಣೆ, ಶಿಕ್ಷಕರ ನೇಮಕಾತಿ ಮತ್ತು ತರಬೇತಿ, ಕಲಿಕಾ ಕೌಶಲವನ್ನು ಉನ್ನತೀಕರಿಸುವುದು, ಮಕ್ಕಳ ಸರ್ವತೋಮುಖ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವುದು, ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಶಾಲೆ ಮತ್ತು ಸಮಾಜದ ಬಾಂಧವ್ಯವನ್ನು ಬಲಪಡಿಸುವ ದಿಸೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಸ್ಥಾಪನೆ , ಹಳೆ ವಿದ್ಯಾರ್ಥಿ ಸಂಘದ ಪುನಶ್ಚೇತನದ ಕುರಿತು ಸಾಕಾರಾತ್ಮಕ ಚರ್ಚೆ ನಿರ್ಧಾರಗಳು ಮೂಡಿಬಂದವು.
ನೂತನ ನಿರ್ವಹಣಾ ಸಭೆಯಲ್ಲಿ ಗೌರವಾಧ್ಯಕ್ಷರಾದ ರಘುರಾಮ ಮಧ್ಯಸ್ಥ, ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷರಾದ ರಮೇಶ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾದ ಮಹೇಶ ಕುಮಾರ್, ನಿವೃತ್ತ ಮುಖ್ಯ ಉಪಾಧ್ಯಾಯರಾದ ಚಂದ್ರಶೇಖರ ಅಡಿಗ, ನೀಲಾವರ ಗ್ರಾಮ ಪಂಚಾಯತ್ ಪಿ ಡಿ ಒ ಗೀತಾ ಶಾನುಭಾಗ್, ಸಂತೋಷ್ ಶೆಟ್ಟಿ ಯಲ್ಲಂಪಳ್ಳಿ, ಶೈಲಶ್ರೀ ನಾಯಕ್, ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವರ್ಗವು ಅತ್ಯುತ್ಸಾಹದಿಂದ ಭಾಗವಹಿಸಿ ನಮ್ಮೂರು ನಮ್ಮ ಶಾಲೆಯನ್ನು ಉಳಿಸಿ ಬೆಳೆಸುವ ಬಗ್ಗೆ ತಮ್ಮ ಸಮರ್ಪಣಾ ಭಾವವನ್ನು ವ್ಯಕ್ತಪಡಿಸಿದರು. ಮೇ ಒಂದರಿಂದಲೇ ಶಾಲೆಯಲ್ಲಿ ಮುಂದಿನ ವರ್ಷದ ಪ್ರವೇಶಾತಿಗಳನ್ನು ದಾಖಲಿಸಲು ಸರ್ವಕ್ರಮಗಳನ್ನು ಕೈಗೊಳ್ಳಲಾಯಿತು. ಕೊನೆಯಲ್ಲಿ ನೀಲಾವರ ಗ್ರಾಮ ಪಂಚಾಯತ್ ಪಿಡಿಒ ವಂದಿಸಿದರು.


