ಕುಂದಾಪುರ : ಕುಂದಾಪುರ ಮೂಡ್ಲಕಟ್ಟೆಯ ವಿದ್ಯಾ ಅಕಾಡೆಮಿಯಲ್ಲಿ, ಕೋಟೇಶ್ವರ ಶ್ರೀದೇವಿ ಡೆಂಟಲ್ ಕ್ಲಿನಿಕ್‌ನ ಡಾ. ಜಗದೀಶ್, ದಂತ ಆರೈಕೆ ಮತ್ತು ಹಲ್ಲುಗಳ ಸ್ವಚ್ಛತೆಯ ಕುರಿತ ವಿಶೇಷ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳಿಗೆ , ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡುವ ವಿಧಾನ ಹಾಗೂ ದಂತ ಆರೋಗ್ಯದ ಮಹತ್ವವನ್ನು ದಂತಪಂಗ್ತಿಯ ವಿಶೇಷ ಆಕರ್ಷಕ ಮಾಡೆಲ್ ಗಳೊಂದಿಗೆ ಕೋಟೇಶ್ವರದ ಶ್ರೀದೇವಿ ದಂತ ಚಿಕಿತ್ಸಾಲಯದ ಡಾ. ಜಗದೀಶ್ ರವರು ಮನೋಜ್ಞವಾಗಿ ವಿವರಿಸಿ ಅರ್ಥೈಸಿದರು.

ವಿದ್ಯಾ ಅಕಾಡೆಮಿಯ ಮಕ್ಕಳು ಅತ್ಯುತ್ಸಾಹದಿಂದ ಭಾಗವಹಿಸಿ ವೈದ್ಯರು ಹೇಳಿದ್ದನ್ನು ಪಾಲಿಸಿ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುತ್ತೇವೆಂದು ವೈದ್ಯರಿಗೆ ಭರವಸೆಯಿತ್ತರು. ಈ ಸಂದರ್ಭದಲ್ಲಿ ಮಾತನಾಡಿದ ಐಎಂಜೆ ಸಂಸ್ಥೆಗಳ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ, ವಿದ್ಯಾ ಅಕಾಡೆಮಿಯ ಪ್ರಯತ್ನವನ್ನು ಶ್ಲಾಘಿಸಿ, ಮಕ್ಕಳಲ್ಲಿ ದಂತ ಆರೈಕೆಯ ಬಗ್ಗೆ ಜಾಗೃತಿ ಮೂಡಿಸಿದ ಡಾ. ಜಗದೀಶ್ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಅವರು, ಐಎಂಜೆ ಗುಂಪಿನ ಎಲ್ಲಾ ಸಂಸ್ಥೆಗಳು ಸದಾ ವಿದ್ಯಾರ್ಥಿಗಳಿಗೆ ನೂತನ ಹಾಗೂ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಶಾಲಾ ನಿರ್ವಾಹಕಿ ಶ್ರೀಮತಿ ಪಾವನಾ ಮಹೇಶ್ , ಬೋಧಕ ಹಾಗು ಬೋಧಕೇತರ ಸಿಬ್ಬಂದಿ ಹಾಜರಿದ್ದರು.