ಉಡುಪಿ : ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶ್ರದ್ಧಾಂಜಲಿ ಸಲ್ಲಿಸಿರುವುದು ಹಾಗೂ ದೇಶದ ಹಲವೆಡೆ ನಡೆದ ಪ್ರತಿಭಟನೆಗಳ ಕುರಿತು ಮಾಜಿ ಸಚಿವ ವಿ. ಸುನಿಲ್ ಕುಮಾರ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಎಚ್ಚರಿಕೆಯ ನಡೆ ಇರಿಸಬೇಕಿತ್ತು. ಭಾರತ ಸರ್ಕಾರ ತನ್ನ ವಿದೇಶಾಂಗ ನೀತಿಯ ಬಗ್ಗೆ ಯಾವುದೇ ಅಧಿಕೃತ ನಿಲುವು ಪ್ರಕಟಿಸದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಕಣ್ಣೀರು ಸುರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಈ ಕುರಿತು ಸಿಂಪತಿ ವ್ಯಕ್ತಪಡಿಸುವುದು ತಪ್ಪು. ಇದು ವಿದೇಶಾಂಗ ನೀತಿಗೆ ಮಾಡಿದ ಅಪಮಾನ. ಮುಖ್ಯಮಂತ್ರಿ ಭಾರತ ಸರ್ಕಾರದ ನಿಲುವನ್ನು ಗಮನಿಸಿ ಮಾತನಾಡಬೇಕಿತ್ತು. ರಾಜ್ಯದ ವೋಟ್ ಬ್ಯಾಂಕ್ ಕಣ್ಮುಂದೆ ಇಟ್ಟುಕೊಂಡು ಹೇಳಿಕೆ ನೀಡಬಾರದು ಎಂದು ಹೇಳಿದರು.ಇರಾನ್ನಿಂದ ಲಾಸ್ ಎಂಜಲೀಸ್ ತನಕ ಈ ಘಟನೆಯನ್ನು ಕೆಲವರು ಸಂಭ್ರಮಿಸುತ್ತಿದ್ದಾರೆ. ಸರ್ವಾಧಿಕಾರಿ ವಿರುದ್ಧ ಹೋರಾಟ ನಡೆಸಿದ ಗುಂಪುಗಳಿವೆ. ಭಾರತದಲ್ಲಿಯೂ, ಅದರಲ್ಲೂ ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಕೆಲವೆಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿರುವುದಾಗಿ ವರದಿಯಾಗಿದೆ. “ಇವರ ನಿಷ್ಠೆ ಎಲ್ಲಿದೆ ಎಂಬುದು ಪ್ರಶ್ನಾರ್ಥಕ” ಎಂದು ಅವರು ಹೇಳಿದರು.

ಫೈಹಲ್ಗಾಂ ದಾಳಿ ವೇಳೆ ನಾಗರಿಕರು ಮೃತಪಟ್ಟಾಗ ಅಥವಾ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿಗಳು ನಡೆದಾಗ ಈ ರೀತಿ ಪ್ರತಿಭಟನೆ ನಡೆದಿಲ್ಲ. ಇಂತಹ ಸಂದರ್ಭಗಳಲ್ಲಿ ಮೌನವಾಗಿದ್ದವರು ಈಗ ರಸ್ತೆಗೆ ಇಳಿದಿರುವುದು ಗಂಭೀರ ವಿಚಾರ ಎಂದು ಹೇಳಿದರು. ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರ ವಹಿವಾಟು ಇರುವ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇರಿಸಬೇಕಿತ್ತು. ಯುದ್ಧ ಬೇಡ ಎನ್ನುವುದು ಸಾಮಾನ್ಯ ಅಭಿಪ್ರಾಯ. ಆದರೆ ನಿಷ್ಠೆ ಭಾರತಕ್ಕೆ ಇರಬೇಕು, ಬೇರೆ ದೇಶಗಳ ವಿಚಾರದಲ್ಲಿ ಶಾಂತಿ ಭಂಗ ಮಾಡುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಸಲಹೆ ನೀಡಿದರು.



