ಉಡುಪಿ : ಅಧಿಕೃತ ರಹದಾರಿ ದಾಖಲೆಗಳಿಲ್ಲದೆ ಶ್ರೀಗಂಧದ ಕೊರಡುಗಳು, ಮರದ ದಿಮ್ಮಿಗಳು ಹಾಗೂ ಎಳೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ವಶಪಡಿಸಿಕೊಂಡಿರುವ ಐದು ವಾಹನಗಳ ಮಾಲೀಕರು ತಮ್ಮ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೂಚಿಸಿದ್ದಾರೆ.

ಕರ್ನಾಟಕ ಅರಣ್ಯ ಕಾಯಿದೆ–1963ರ ವಿಧಿ 71(ಎ) ಅಡಿಯಲ್ಲಿ ಶಂಕರನಾರಾಯಣ, ಕಾರ್ಕಳ ಹಾಗೂ ಕೋಟ ವ್ಯಾಪ್ತಿಯಲ್ಲಿ ಕೆಳಗಿನ ವಾಹನಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ: ಹೀರೋ ಹೊಂಡಾ ಗ್ಲಾಮರ್ ಬೈಕ್ – ಕೆಎ 20 ಯು 6915, ಮಹೇಂದ್ರ ಬೊಲೆರೋ – ಕೆಎ 20 ಡಿ 3944, ಟಾಟಾ 407 ಟೆಂಪೋ – ಕೆಎ 19 ಬಿ 7663, ಟಾಟಾ 407 ಟೆಂಪೋ – ಕೆಎ 20 ಬಿ 4096, ಟಾಟಾ ಏಸ್ ಗೂಡ್ಸ್ ಟೆಂಪೋ – ಕೆಎ 20 ಬಿ 6100, ವಾಹನಗಳ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಿದ್ದರೂ, ಮಾಲೀಕತ್ವಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಸಲ್ಲಿಸಿಲ್ಲ. ಅಲ್ಲದೆ, ವಿಚಾರಣೆಗೂ ಸತತವಾಗಿ ಗೈರುಹಾಜರಾಗಿದ್ದಾರೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಪ್ರಕಟಣೆ ಹೊರಬಿದ್ದ ದಿನದಿಂದ 30 ದಿನಗಳೊಳಗಾಗಿ ಮೇಲ್ಕಂಡ ವಾಹನಗಳ ಮಾಲೀಕರು ತಮ್ಮ ಮಾಲೀಕತ್ವವನ್ನು ಸಾಬೀತುಪಡಿಸುವ ಸಂಪೂರ್ಣ ದಾಖಲೆಗಳನ್ನು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ದಾಖಲೆ ಸಲ್ಲಿಸಲು ವಿಫಲವಾದಲ್ಲಿ ಕರ್ನಾಟಕ ಅರಣ್ಯ ಕಾಯಿದೆಯನ್ವಯ ವಾಹನಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.


