Friday, March 13, 2026

spot_img

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ, ಪರಿಶೀಲನೆ..

ಉಡುಪಿ : ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಎಸ್. ಕೋಸಂಬೆ ಅವರು ಶುಕ್ರವಾರ ನಗರದ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ವಿಶೇಷ ನವಜಾತ ಶಿಶುಗಳ ಚಿಕಿತ್ಸಾ ಘಟಕ ಹಾಗೂ ತಾಯಿ ಆರೈಕೆ ಕೇಂದ್ರಗಳನ್ನು ಪರಿಶೀಲಿಸಿದರು. ವಿಶೇಷ ನವಜಾತ ಶಿಶು ಚಿಕಿತ್ಸಾ ಘಟಕದಲ್ಲಿ ನವಜಾತ ಶಿಶುಗಳಿಗೆ ನೀಡಲಾಗುತ್ತಿರುವ ಆರೈಕೆ ಕುರಿತು ಮಾಹಿತಿ ಪಡೆದು, ಘಟಕದಲ್ಲಿ ನಿರ್ವಹಿಸಲಾಗುತ್ತಿರುವ ರಿಜಿಸ್ಟರ್‌ಗಳು ಹಾಗೂ ಕಡತಗಳನ್ನು ಪರಿಶೀಲಿಸಿದರು. ಈ ವೇಳೆ ಸರ್ಕಾರದ ಮಾರ್ಗಸೂಚಿ ಅನ್ವಯ ರಿಜಿಸ್ಟರ್‌ಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

ಚಿಕಿತ್ಸೆ ಪಡೆಯುತ್ತಿರುವ ನವಜಾತ ಶಿಶುಗಳ ಕೇಸ್‌ ಶೀಟ್‌ಗಳಲ್ಲಿ ಮಕ್ಕಳ ಹೆಸರು ಅಥವಾ ಅವರ ತಂದೆ–ತಾಯಿಗಳ ಹೆಸರುಗಳನ್ನು ನಮೂದಿಸದೇ ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ದಾಖಲೆಗಳನ್ನು ನಿಯಮಾನುಸಾರ ನಿರ್ವಹಿಸಬೇಕು ಎಂದು ಅಲ್ಲಿನ ವೈದ್ಯರಿಗೆ ತಿಳಿಸಿದರು. ಸರಿಯಾದ ನಿರ್ವಹಣೆ ಮಾಡದ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸರ್ಜನ್‌ಗೆ ಸೂಚನೆ ನೀಡಿದರು. ತಾಯಿ ಆರೈಕೆ ಘಟಕ ಹಾಗೂ ಹಾಲುಣಿಸುವ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ವ್ಯವಸ್ಥೆಗಳು ವೈಜ್ಞಾನಿಕವಾಗಿ ಸಮರ್ಪಕವಾಗಿಲ್ಲ ಎಂಬುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ಒದಗಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಕೇಂದ್ರದಲ್ಲಿ ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರ (ಎನ್‌ಆರ್‌ಸಿ) ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂತಹ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಜಿಲ್ಲೆಯಲ್ಲಿಯೂ ತಕ್ಷಣವೇ ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಇದೇ ಸಂದರ್ಭದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ, ಹಂದಾಡಿ ಗ್ರಾಮ ಪಂಚಾಯತ್ ಕಚೇರಿ, ಅಲ್ಲಿನ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 ಎಲ್ಲಾ ಕಚೇರಿಗಳಲ್ಲಿಯೂ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಗ್ರಾಮಸಭೆ, ಮಕ್ಕಳ ರಕ್ಷಣಾ ಸಮಿತಿ ಸಭೆ ಹಾಗೂ ಶಿಕ್ಷಣ ಕಾರ್ಯಪಡೆ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ಜನ್ ಡಾ. ಅಶೋಕ್, ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಆರ್‌ಸಿಎಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ., ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles