Saturday, October 31, 2026

spot_img

ರಫ್ತು ಉದ್ದಿಮೆದಾರರಿಗೆ ರಫ್ತು ಪ್ರೋತ್ಸಾಹನ ಕಾರ್ಯಾಗಾರ

ಉಡುಪಿ : ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಜವಳಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸುವ ಹಾಗೂ ರಫ್ತು ವಹಿವಾಟನ್ನು ಹೆಚ್ಚಿಸುವ ಉದ್ದೇಶದಿಂದ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಆಶ್ರಯದಲ್ಲಿ ಜವಳಿ ವಲಯದ ರಫ್ತು ಉದ್ದಿಮೆದಾರರಿಗಾಗಿ ಒಂದು ದಿನದ ರಫ್ತು ಪ್ರೋತ್ಸಾಹನ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ಪೂರ್ವ ವಲಯದ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕಿ ಸುಮಲತಾ ಡಿ., ಭಾರತದ ಜವಳಿ ಉದ್ಯಮವು ದೇಶದ ಆರ್ಥಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿದೆ. 2025-26ನೇ ಆರ್ಥಿಕ ಸಾಲಿನಲ್ಲಿ ಜವಳಿ ಉದ್ಯಮವು ಸುಮಾರು 35 ಬಿಲಿಯನ್ ಡಾಲರ್ ರಫ್ತು ವಹಿವಾಟು ದಾಖಲಿಸಿದೆ. 2030ರ ವೇಳೆಗೆ ಈ ವಹಿವಾಟನ್ನು 100 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಲಾಗಿದೆ ಎಂದರು.

ಈ ಗುರಿ ಸಾಧಿಸುವ ನಿಟ್ಟಿನಲ್ಲಿ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ರಫ್ತು ಪ್ರೋತ್ಸಾಹನ ಕಾರ್ಯಾಗಾರಗಳನ್ನು ಆಯೋಜಿಸಿ ಉದ್ದಿಮೆದಾರರಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ. ಕಾರ್ಯಾಗಾರದಲ್ಲಿ ದೊರೆಯುವ ಮಾಹಿತಿಯನ್ನು ಉದ್ದಿಮೆದಾರರು ಸದುಪಯೋಗಪಡಿಸಿಕೊಳ್ಳಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಯ ಗುಣಮಟ್ಟ ಹಾಗೂ ಮಾನದಂಡಗಳಿಗೆ ಅನುಗುಣವಾಗಿ ಉತ್ಪನ್ನಗಳನ್ನು ತಯಾರಿಸಿ, ರಫ್ತು ಪ್ರಮಾಣವನ್ನು ಹೆಚ್ಚಿಸುವ ಮೂಲಕ ದೇಶದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ವಾಮನ್ ನಾಯ್ಕ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 50ರಿಂದ 60 ರಫ್ತು ಉದ್ದಿಮೆದಾರರು ಜವಳಿ, ಗೋಡಂಬಿ ಹಾಗೂ ಮೀನುಗಾರಿಕೆಗೆ ಸಂಬಂಧಿಸಿದ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಜಿಲ್ಲೆಯ ವಿವಿಧ ಉತ್ಪನ್ನಗಳು ಸುಮಾರು 50 ದೇಶಗಳಿಗೆ ರಫ್ತಾಗುತ್ತಿದ್ದು, ಒಟ್ಟಾರೆ 2,600 ಕೋಟಿ ರೂ. ವಹಿವಾಟು ನಡೆಯುತ್ತಿದೆ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಇನ್ನಷ್ಟು ಅವಕಾಶಗಳನ್ನು ಕಲ್ಪಿಸುವುದು ಹಾಗೂ ರಫ್ತು ಉದ್ಯಮಕ್ಕೆ ಅಗತ್ಯವಾದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವುದು ಕಾರ್ಯಾಗಾರದ ಉದ್ದೇಶವಾಗಿದೆ. ರಫ್ತು ಪ್ರಕ್ರಿಯೆ, ಮಾರುಕಟ್ಟೆ ವಿಸ್ತರಣೆ, ಹಣಕಾಸು ಸೌಲಭ್ಯ ಹಾಗೂ ಗುಣಮಟ್ಟದ ಮಾನದಂಡಗಳ ಕುರಿತು ಉದ್ದಿಮೆದಾರರು ಸಮಗ್ರ ಮಾಹಿತಿ ಪಡೆದುಕೊಂಡು ತಮ್ಮ ಉದ್ಯಮದ ಬೆಳವಣಿಗೆಗೆ ಬಳಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಧಾರವಾಡದ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ. ವಿರಾಜ್ ಸೋಮಕುಮಾರ್, ವಿ.ಟಿ.ಪಿ.ಸಿ.ಯ ಅಬ್ದುಲ್ ರೆಹಮಾನ್ ತಾಜುದ್ದೀನ್ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಭಾಗವಹಿಸಿ ರಫ್ತು ಉದ್ಯಮಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಉಡುಪಿ ಸಣ್ಣ ಕೈಗಾರಿಕೆ ಘಟಕದ ಕಾರ್ಯದರ್ಶಿ ರಂಜನ್ ಕಲ್ಕೂರ, ಜಿಲ್ಲೆಯ ವಿವಿಧ ರಫ್ತು ಉದ್ದಿಮೆದಾರರು ಉಪಸ್ಥಿತರಿದ್ದರು. ಡಿ.ಪಿ.ಆರ್.ಸಿ. ಸಿಬ್ಬಂದಿ ಕೃಷ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles