ಉಡುಪಿ: ಕನ್ನಡ ರಂಗಭೂಮಿ ಭಾರತ ದೇಶದಲ್ಲಿಯೇ ಹೊಸ ರೀತಿಯ ಆಯಾಮ ತೆರೆದುಕೊಂಡಿದೆ. ಕನ್ನಡ ರಂಗಭೂಮಿಯ ಹೊಸಹೊಸ ಪ್ರಯೋಗಗಳು ಭಾರತೀಯ ರಂಗಭೂಮಿಯ ಮುಖವಾಣಿಯಾಗಿ ಕೆಲಸ ಮಾಡಿದೆ. ಆ ಮೂಲಕ ಭಾರತೀಯ ರಂಗಭೂಮಿಯ ಮೇಲೆ ಬಳಷ್ಟು ಪರಿಣಾಮ ಬೀರಿದೆ. ಅವು ಎಲ್ಲವೂ ವಿಮರ್ಶೆ, ಚರ್ಚೆ, ಸಂವಾದ ಹಾಗೂ ಮರು ತಿದ್ದುಪಡಿಗೆ ಒಳಗಾಗಿದೆ ಎಂಬುದೇ ವಿಶೇಷ ಎಂದು ಹಿರಿಯ ರಂಗಕರ್ಮಿ ಡಾ.ಜನಾರ್ದನ(ಜನ್ನಿ) ಮೈಸೂರು ಹೇಳಿದ್ದಾರೆ.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ರಥಬೀದಿ ಗೆಳೆಯರು ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಸಿನೆಮಾದಲ್ಲಿ ಸಣ್ಣ ಮನುಷ್ಯರನ್ನು ದೊಡ್ಡದಾಗಿ ತೋರಿಸುತ್ತಾರೆ. ಆದರೆ ರಂಗಭೂಮಿ ಮನುಷ್ಯರನ್ನು ಇದ್ದ ಹಾಗೆ ತೋರಿಸುತ್ತದೆ. ಅಂದರೆ ಸತ್ಯವನ್ನು ತೋರಿಸುವ ಮಾಧ್ಯಮವಾಗಿದೆ. ಕಣ್ಣಿಗೆ ಕಣ್ಣು ಇಟ್ಟು ಮಾತನಾಡುವ ಏಕೈಕ ಸಾಧನ ರಂಗಭೂಮಿಯಾಗಿದೆ ಎಂದರು.

ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿಯ ಉಡುಪಿ ಜಿಲ್ಲಾ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ಡಾ.ಟಿ.ಎಚ್. ಲವ ಕುಮಾರ್ ಮಾತನಾಡಿದರು. ರಥಬೀದಿ ಗೆಳೆಯರು ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.



