ಉಡುಪಿ : ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡದ ವತಿಯಿಂದ ನೀಡಲಾಗುವ 2023-24ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ಬಾಲ ಗೌರವ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಹೆಮ್ಮಾಡಿ ಮೂಲದ ಪ್ರತಿಭಾವಂತ ವಿದ್ಯಾರ್ಥಿನಿ ಧನ್ವಿ ಮರವಂತೆ ಅವರಿಗೆ ನೀಡಿ ಗೌರವಿಸಲಾಯಿತು. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಜೃಂಭಣೆಯ ಸಮಾರಂಭದಲ್ಲಿ ಧನ್ವಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಹೆಮ್ಮಾಡಿಯ ಜನತಾ ಇಂಡಿಪೆಂಡೆಂಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಧನ್ವಿ ಮರವಂತೆ ಅವರು ಯೋಗ ಹಾಗೂ ಬಹುಮುಖ ಬಾಲ ಪ್ರತಿಭೆ ವಿಭಾಗದಲ್ಲಿ ಸಾಧನೆಗಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇವರು ಶಿವ ಮಾಸ್ತಿ ಮನೆ ಜ್ಯೋತಿ ಚಂದ್ರಶೇಖರ್ ಅವರ ಪುತ್ರಿ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಬಾಲ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ್ ಬಬಲೇಶ್ವರ್ ಸೇರಿದಂತೆ ಇಲಾಖೆಯ ಹಲವಾರು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದು, ಧನ್ವಿ ಮರವಂತೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು.

ವಿದ್ಯಾರ್ಥಿನಿಯ ಈ ಸಾಧನೆಗೆ ನಾಡಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.



