ಕುಂದಾಪುರ : ಸರ್ಕಾರಿ ವಸತಿ ನಿಲಯದ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಯಕ್ಷಗಾನದ ಮೂಲ ಸ್ವರೂಪವನ್ನು ಬಿತ್ತರಿಸುವ ಕಾರ್ಯ ಅಮೂಲ್ಯವಾದದ್ದು ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಶೈಲಾ ಎಂ. ಶೇಟ್ ಹೇಳಿದರು.ಅವರು ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದದ ಆಶ್ರಯದಲ್ಲಿ ಯಡಾಡಿ–ಮತ್ಯಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಪ್ರಸಂಗ–ಪ್ರಯೋಗ–ಪ್ರಾತ್ಯಕ್ಷಿಕೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದಿನವಿಡೀ ಓದು ಹಾಗೂ ವಿವಿಧ ಚಟುವಟಿಕೆಗಳಲ್ಲಿ ನಿರತರಾದ ಮಕ್ಕಳಿಗೆ ಯಕ್ಷಗಾನದ ಪರಂಪರೆಯನ್ನು ಮಕ್ಕಳಿಂದಲೇ ತಿಳಿಸುವ ಪ್ರಯತ್ನ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ಮಾತನಾಡಿ, ಯಕ್ಷಗಾನದ ಯುದ್ಧ ಕುಣಿತ, ಪ್ರಯಾಣ ಕುಣಿತ, ಕಿರಾತನ ಒಡ್ಡೋಲಗ ಮುಂತಾದ ಕಳೆದುಹೋಗುತ್ತಿರುವ ಅಂಶಗಳನ್ನು ಕಲಾವೃಂದ ಜೀವಂತಗೊಳಿಸುತ್ತಿದೆ. ಈ ಶಾಸ್ತ್ರೀಯ ಕಲೆಯನ್ನು ಮಕ್ಕಳಿಗೆ ಕಲಿಸಿದರೆ ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭ ಯಲ್ಲಾಪುರ ಗಣಪತಿ ಭಟ್, ಸುಬ್ರಹ್ಮಣ್ಯ ವೈದ್ಯ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ವಿದ್ಯಾರ್ಥಿ ಹರೀಶ್ ಕಾವಡಿ, ರಂಗ ನಿರ್ದೇಶಕ ಶ್ರೀಶ ಭಟ್ ತೆಕ್ಕಟ್ಟೆ ಉಪಸ್ಥಿತರಿದ್ದರು. ಸಭೆಯ ಬಳಿಕ ಯಶಸ್ವಿ ಕಲಾವೃಂದದ ಮಕ್ಕಳಿಂದ ‘ಪ್ರಸಂಗ–ಪ್ರಯೋಗ–ಪ್ರಾತ್ಯಕ್ಷಿಕೆ’ ರಂಗ ಪ್ರಸ್ತುತಿ ನಡೆಯಿತು.


