Saturday, March 21, 2026

spot_img

ಯಕ್ಷಗಾನ ದಿಗ್ಗಜ ಕೆ. ಗೋವಿಂದ ಭಟ್ ನಿಧನ…

ಉಡುಪಿ: ಯಕ್ಷಗಾನದ ದಶಾವತಾರಿ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಕಲಾವಿದ ಸೂರಿಕುಮೇರಿ ಕೆ. ಗೋವಿಂದ ಭಟ್ (88) ಅವರು ತೀರ್ಥಹಳ್ಳಿಯ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ. ಬಂಟ್ವಾಳ ತಾಲೂಕಿನ ಕುಕ್ಕೆಮನೆಯ ಶಂಕರನಾರಾಯಣ ಭಟ್ ಹಾಗೂ ಲಕ್ಷ್ಮಿಅಮ್ಮ ದಂಪತಿಯ ಪುತ್ರರಾಗಿದ್ದ ಅವರು, ಹನ್ನೊಂದನೇ ವಯಸ್ಸಿನಲ್ಲೇ ಯಕ್ಷರಂಗ ಪ್ರವೇಶಿಸಿ ಏಳು ದಶಕಗಳಿಗೂ ಅಧಿಕ ಕಾಲ ಕಲಾಸೇವೆ ಸಲ್ಲಿಸಿದ್ದರು. ಯಕ್ಷಗಾನದ ಸೀಮಾಪುರುಷ ಕುರಿಯ ವಿಠಲ ಶಾಸ್ತ್ರಿಗಳ ಶಿಷ್ಯರಾಗಿದ್ದ ಅವರು, ನಂತರ ಪರಮಶಿವನ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿ ನೃತ್ಯದಲ್ಲಿ ವಿಶಿಷ್ಟ ನೈಪುಣ್ಯ ಗಳಿಸಿದ್ದರು.

ಯಕ್ಷಗಾನದ ಆಹಾರ್ಯ, ಆಂಗಿಕ, ವಾಚಿಕ ಹಾಗೂ ಸಾತ್ವಿಕ ಎಂಬ ನಾಲ್ಕು ಅಂಗಗಳಲ್ಲೂ ಅಪಾರ ಪಾಂಡಿತ್ಯ ಹೊಂದಿದ್ದ ಅವರು, ಬಡಗು ತಿಟ್ಟಿನಲ್ಲೂ ವೇಷಧಾರಣೆ ಮಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಧರ್ಮಸ್ಥಳ ಮೇಳದಲ್ಲಿ ಐದುವರೆ ದಶಕಗಳ ಕಾಲ ನಿರಂತರ ಸೇವೆ ಸಲ್ಲಿಸಿದ ಅವರು, ಮುಲ್ಕಿ, ಕೂಡ್ಲು, ಇರಾ ಹಾಗೂ ಸುರತ್ಕಲ್ ಮೇಳಗಳಲ್ಲೂ ತಮ್ಮ ಕಲಾಪ್ರತಿಭೆಯನ್ನು ಮೆರೆದಿದ್ದರು.

ಸ್ತ್ರೀವೇಷ, ಪುಂಡುವೇಷ, ರಾಜವೇಷ, ಹಾಸ್ಯ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಸಮರ್ಥ ಅಭಿನಯ ನೀಡಿ, ನಾಯಕ ಹಾಗೂ ಪ್ರತಿನಾಯಕ ಪಾತ್ರಗಳ ಮೂಲಕ ಕಲಾರಸಿಕರ ಮನ ಗೆದ್ದಿದ್ದರು. ಧರ್ಮಸ್ಥಳ ಸೇರಿದಂತೆ ಹಲವು ಕಡೆಗಳಲ್ಲಿ ಯಕ್ಷಗಾನ ತರಬೇತಿ ನೀಡಿ ನೂರಾರು ಶಿಷ್ಯರನ್ನು ರೂಪಿಸಿದ ಕೀರ್ತಿ ಅವರದ್ದು.ಅವರ ವಾಗ್ವೈಖರಿ ಹಾಗೂ ಅರ್ಥಧಾರಿತ್ವವು ಅವರನ್ನು ಕೂಟಗಳಲ್ಲೂ ವಿಶಿಷ್ಟ ಸ್ಥಾನಕ್ಕೆ ಏರಿಸಿತ್ತು. ‘ಮಣಿಮೇಖಲೆ’, ‘ಕನಕರೇಖೆ’, ‘ಕಾವೇರಿ ಮಹಾತ್ಮೆ’ ಸೇರಿದಂತೆ ಹಲವು ಪ್ರಸಂಗಗಳನ್ನು ರಚಿಸಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದಿದ್ದರು. ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಅವರ ಅಮೃತ ಮಹೋತ್ಸವದ ಅಂಗವಾಗಿ ‘ಗೋವಿಂದ ವೈಭವ’ ಕಾರ್ಯಕ್ರಮದ ಮೂಲಕ ಅವರ ಪ್ರಸಿದ್ಧ ವೇಷಗಳ ದಾಖಲಾತಿ ಮಾಡಲಾಗಿತ್ತು. ಇತ್ತೀಚೆಗೆ ಪಲಿಮಾರು ಮಠದಿಂದ “ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ” ನೀಡಿ ಗೌರವಿಸಲಾಗಿತ್ತು. ಯಕ್ಷಗಾನ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಈ ಮಹಾನ್ ಕಲಾವಿದರ ನಿಧನಕ್ಕೆ ಕಲಾರಂಗದ ವಲಯದಲ್ಲಿ ಶೋಕ ವ್ಯಕ್ತವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles