ಉಡುಪಿ : ಯಕ್ಷಗಾನ ಕಲಾರಂಗದ ಸಾಮಾಜಿಕ ಸೇವಾ ಕಾರ್ಯಗಳ ಭಾಗವಾಗಿ 92ನೇ ಮನೆಯ ಹಸ್ತಾಂತರ ಕಾರ್ಯಕ್ರಮ ಉದ್ಯಾವರದಲ್ಲಿ ನೆರವೇರಿತು. ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಯಜ್ಞ ಅವರಿಗೆ ಎಂ. ಗಂಗಾಧರ ರಾವ್ ಅವರ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾದ ‘ನಂದಾದೀಪ’ ನೂತನ ಮನೆಯನ್ನು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಅನುಗ್ರಹ ಸಂದೇಶದಲ್ಲಿ ಅವರು ಮಾತನಾಡಿ, ಎಂ. ಗಂಗಾಧರ ರಾವ್ ಅವರು ಮಾದರಿ ಅಧ್ಯಕ್ಷರಾಗಿದ್ದು, ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಅಪರೂಪದ ಸೇವಾಭಾವ ತೋರಿದ್ದಾರೆ. ದಾನಿಗಳಿಂದ ಬಂದ ನಿಧಿಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿ, ತಾವೇ ದಾನಿಗಳಾಗಿರುವುದು ಸಂಸ್ಥೆಯ ನೈತಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಈಗಾಗಲೇ ಆರು ಮನೆಗಳಿಗೆ ಪ್ರಾಯೋಜಕತ್ವ ವಹಿಸಿರುವ ಅವರಿಗೆ ಇಂತಹ ಸೇವಾ ಕಾರ್ಯಗಳನ್ನು ಮುಂದುವರಿಸಲು ಭಗವಂತ ಶಕ್ತಿ ನೀಡಲಿ ಎಂದು ಆಶಿಸಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಯೋಜಕ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ವೇದಿಕೆಯಲ್ಲಿ ವಿಜಯ ಇಂಡಸ್ಟ್ರೀಸ್ ಮಾಲಕ ಕೆ. ಸತ್ಯೇಂದ್ರ ಪೈ, ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಯೋಗೀಶ್ಚಂದ್ರಧರ್, ನ್ಯಾಯವಾದಿ ಎಂ. ಗೋಪಿಕೃಷ್ಣ ರಾವ್, ಹಿರಿಯ ಯು. ವಿಶ್ವನಾಥ ಶೆಣೈ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಹಿಂದೆ ಮನೆಗಳಿಗೆ ಪ್ರಾಯೋಜಕತ್ವ ವಹಿಸಿದ್ದ ಮರ್ಣೆ ಉಮೇಶ್ ಭಟ್, ಡಾ. ಜೆ.ಎನ್. ಭಟ್, ಯು.ಎಸ್. ರಾಜಗೋಪಾಲ್ ಆಚಾರ್ಯ, ಅರವಿಂದ ನಾಯಕ್, ಪಿ. ಕೃಷ್ಣಮೂರ್ತಿ ಭಟ್, ವಿಜಯ್ ಕುಮಾರ್ ಮುದ್ರಾಡಿ ಹಾಗೂ ಮುಂದಿನ ಪ್ರಾಯೋಜಕರು ವಿಷ್ಣುಮೂರ್ತಿ ಭಟ್, ಸುದರ್ಶನ ಮೂರ್ತಿ–ಲಕ್ಷ್ಮಿ ದಂಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉಡುಪಿ ಇಂಜಿನಿಯರ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಮತ್ತು ಸದಸ್ಯರು, ಗಂಗಾಧರ ರಾವ್ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.



