ಉಡುಪಿ : ಕಲಾವಿದರು ಇಂತಹ ಕ್ಷುಲ್ಲಕ ಮಾತುಗಳಿಗೆ ಅಧೀರರಾಗಬೇಕಾದ್ದಿಲ್ಲ, ಶತಮಾನಗಳಿಂದಲೂ ಸಮಾಜವನ್ನು ತಿದ್ದುವಲ್ಲಿ ಯಕ್ಷಗಾನ ಕಲೆ ಗಣನೀಯ ಪಾತ್ರ ವಹಿಸಿದೆ. ಯಕ್ಷಗಾನ ಕಲಾರಂಗ ಸಾಮಾಜಿಕ ಸಾಂಸ್ಕೃತಿಕ ಕೆಲಸಗಳನ್ನು ಮಾಡುವ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಅವರು ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾದ ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷ ಡಾ. ಜಿ. ಶಂಕರ್ ಪ್ರಶಸ್ತಿ ಪ್ರದಾನ ಮಾಡಿ ಯಕ್ಷಗಾನ ಕಲಾರಂಗದ ಸಾಧನೆಗೆ ಅಭಿನಂದಿಸಿದರು.

ಕರ್ಣಾಟಕ ಬ್ಯಾಂಕ್ನ ಆಡಳಿತ ನಿರ್ದೇಶಕಎಂ. ರಾಘವೇಂದ್ರ ಭಟ್ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಕ್ಷರಂಗಾಯಣದ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ್, ಟೆಕ್ಸೆಲ್ ಪ್ರೈ ಲಿ.ನ ಎಂ.ಡಿ. ಹರೀಶ್ ರಾಯಸ್, ಖ್ಯಾತ ವೈದ್ಯ ಡಾ. ಕಬ್ಯಾಡಿ ಹರಿರಾಮ ಆಚಾರ್ಯ, ಕೆ. ಎಂ. ಉಡುಪ ಟ್ರಸ್ಟ್ನ ವಿಶ್ವಸ್ಥ ಕೆ. ಮಹೇಶ್ ಉಡುಪ, ಕೃಷಿತಜ್ಞರಾದ ಡಾ. ಪಡಾರು ರಾಮಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು.

ಕಲಾವಿದರಾದ ಸುಬ್ರಹ್ಮಣ್ಯ ಚಿಟ್ಟಾಣಿ, ಕಕ್ಕುಂಜೆ ಗೋಪಾಲ ಬಳೆಗಾರ, ಕೊಡೇರಿ ಕೃಷ್ಣ, ಕಲ್ಲ್ಲಗುಡ್ಡೆ ಲಕ್ಷ್ಮಣ ಪೂಜಾರಿ, ರಾಧಾಕೃಷ್ಣ ಭಟ್ ಸೂರನಕೇರಿ, ಸುರೇಶ ಉಪ್ಪೂರ, ಕೃಷ್ಣಯ್ಯ ಬಿ. ಆಚಾರ್ ಬಿದ್ಕಲ್ಕಟ್ಟೆ, ಮನೋಹರ ರಾವ್ ಕೆ.ಜಿ ಸೀತೂರು, ಪ್ರಭಾಕರ ಶೆಟ್ಟಿ ಮಡಾಮಕ್ಕಿ, ವಿಷ್ಣು ಮಂಜಪ್ಪ ಆಚಾರಿ ಬಳಕೂರು, ಲಕ್ಷ್ಮೀನಾರಾಯಣ ಸಂಪ, ಸಂಜೀವ ಶೆಟ್ಟಿ ಆಜ್ರಿಹರ, ಸುಣ್ಣಂಬಳ ವಿಶ್ವೇಶ್ವರ ಭಟ್, ಸುರೇಶ್ ರಾವ್ ಬಾರ್ಕೂರು, ಅಪ್ಪಯ್ಯ ಮಣಿಯಾಣಿ, ಕೃಷ್ಣಮೂರ್ತಿ ಉರಾಳ, ರಾಮ ಕೇಶವ ಗೌಡ ಗುಣವಂತೆ, ಕಡಬ ರಾಮಚಂದ್ರ ರೈ, ಉಮೇಶ ಮೊಯಿಲಿ ಮೂರುಕಾವೇರಿ, ಶಿವಣ್ಣ ಶೆಟ್ಟಿ ಸರಪಾಡಿ, ಮೋಹನ್ ನಾಯಕ್ ಕೂಜಳ್ಳಿ, ಬಲಿಪ ವಿಶ್ವೇಶ್ವರ ಭಟ್, ಮಹಾಬಲ ಭಟ್ ಭಾಗಮಂಡಲ ಅವರುಗಳನ್ನು ತಲಾ ರೂ. 20 ಸಾವಿರ ನಗದು ಸಹಿತ ಫಲಕ ನೀಡಿ ಸಂಮಾನಿಸಲಾಯಿತು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಮಾತನಾಡಿದರು. ಯಕ್ಷ ಕಲಾ ಅಕಾಡೆಮಿ (ರಿ.), ಬೆಂಗಳೂರು ಸಂಸ್ಥೆಗೆ ಶ್ರೀ ವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ರೂ. 1,00,000 ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಕೆ. ಕೃಷ್ಣಮೂರ್ತಿ ತುಂಗರು ಪ್ರಶಸ್ತಿ ಸ್ವೀಕರಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರಿಗೆ ‘ಯಕ್ಷ ಚೇತನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇತ್ತೀಚಿಗೆ ನಿಧನರಾದ ಈಶ್ವರ ಗೌಡ ಇವರ ಕುಟುಂಬಕ್ಕೆ 50,000/- ರೂಪಾಯಿ ಸಾಂತ್ವನ ನಿಧಿಯನ್ನು ನೀಡಲಾಯಿತು. ಯಕ್ಷಗಾನ ಕಲಾವಿದರ ಮಕ್ಕಳಿಗೆ ನೀಡುವ ಯಕ್ಷವಿದ್ಯಾಪೋಷಕ್ ಸಹಾಯಧನವನ್ನು ಕಲಾವಿದರ 62 ಮಕ್ಕಳಿಗೆ 7,11,500 ರೂಪಾಯಿಯನ್ನು ಸಾಂಕೇತಿಕವಾಗಿ ವಿತರಿಸಿದರು.

ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು, ಮುರಳಿ ಕಡೆಕಾರ್ ಪ್ರಸ್ತಾವಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭೆಯ ಪೂರ್ವದಲ್ಲಿ ಸಂಸ್ಥೆಯ ಸದಸ್ಯ ಗಣೇಶ ಬ್ರಹ್ಮಾವರ ಸಂಯೋಜನೆಯಲ್ಲಿ ಬಡಗುತಿಟ್ಟು ಯಕ್ಷಗಾನ ತಾಮ್ರಧ್ವಜ ಕಾಳಗವು ಸೊಗಸಾಗಿ ಪ್ರದರ್ಶಿಸಲ್ಪಟ್ಟಿತು.



