ಹೆಬ್ರಿ: ಕಳೆದ ಮೂರು ವರ್ಷಗಳಿಂದ ಗ್ರಾಮಸ್ಥರಿಗೆ ತೊಂದರೆ ಉಂಟುಮಾಡುತ್ತಿದ್ದ ಕೊಬ್ಬಿದ ಗೂಳಿಯನ್ನು ಗ್ರಾಮಸ್ಥರು ಹಾಗೂ ಇಲಾಖೆಯ ಸಹಕಾರದಿಂದ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಿಂಗಳೆ ಭಾಗದ ಮೆಗದ್ದೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಗೂಳಿ ಜನರಿಗೆ ಆತಂಕ ಉಂಟುಮಾಡುತ್ತಿತ್ತು.

ಸುಮಾರು 25ಕ್ಕೂ ಹೆಚ್ಚು ಮನೆಗಳಿರುವ ಈ ಪ್ರದೇಶದ ನಿವಾಸಿಗಳು ಗೂಳಿಯ ಕಾಟದಿಂದ ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದರು. ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುವುದು, ಹಟ್ಟಿಗಳಲ್ಲಿ ನುಗ್ಗಿ ಜನರನ್ನು ಓಡಿಸುವುದು ಮುಂತಾದ ಘಟನೆಗಳು ಆಗಾಗ ನಡೆಯುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದರು.

ಶಾಲೆಗೆ ಹೋಗುವ ಮಕ್ಕಳನ್ನೂ ಗೂಳಿ ಅಟ್ಟಿಸಿಕೊಂಡು ಹೋಗುತ್ತಿದ್ದುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 20ಕ್ಕೂ ಹೆಚ್ಚು ಬಾರಿ ಗೂಳಿ ಮಕ್ಕಳನ್ನು ಅಟ್ಟಾಡಿಸಿದ ಬೆದರಿಸಿದ ಪರಿಸ್ಥಿತಿ ಎದುರಾಗಿತ್ತು.

ಈ ಬಗ್ಗೆ ಕಳೆದ ವರ್ಷವೇ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಳಿಕ ಸಮಸ್ಯೆ ಗಂಭೀರವಾಗುತ್ತಿದ್ದಂತೆ ಗ್ರಾಮಸ್ಥರು ಹೆಬ್ರಿ ತಾಲೂಕು ಕಚೇರಿ ಎದುರು ಧರಣಿ ನಡೆಸಿ ಪ್ರತಿಭಟಿಸಿದ್ದರು.

ಧರಣಿಯ ನಂತರ ಗ್ರಾಮಸ್ಥರ ಒತ್ತಡದ ಮೇರೆಗೆ ಇಲಾಖೆಯ ಸಹಕಾರದೊಂದಿಗೆ ಸ್ಥಳೀಯರು ಶುಕ್ರವಾರ ರಾತ್ರಿ ಕಾರ್ಯಾಚರಣೆ ನಡೆಸಿ ಗೂಳಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ಸಂಜೆ ಸೆರೆಹಿಡಿದ ಗೂಳಿಯನ್ನು ಹೆಬ್ರಿಯ ಗಿಲ್ಲಾಳಿಯ ಗೋಶಾಲೆಗೆ ಒಪ್ಪಿಸಲಾಗಿದೆ.

ಈ ವೇಳೆ ಪಂಚಾಯತ್ ಮಾಜಿ ಅಧ್ಯಕ್ಷ ನವೀನ್ ಕುಮಾರ್, ವಿಜಯಕುಮಾರ್ ಸೆಟ್ಟಿ ಸೀತಾನದಿ, ಭಾಸ್ಕರ್ ಸೆಟ್ಟಿ ಗುಲ್ಕಾಡು, ರಮೇಶ್ ಶೆಟ್ಟಿ ಅಜ್ಜೊಳ್ಳಿ, ರಾಜೇಶ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸುದರ್ಶನ್ ಹೆಗ್ಡೆ ಅಜ್ಜೊಳ್ಳಿ, ಸದಾಶಿವ ಗೌಡ, ಮಹೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಗುಡ್ಡೆಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.



