ಕುಂದಾಪುರ: ರಸ್ತೆ ಪಕ್ಕ ನಿಲ್ಲಿಸಲಾಗಿದ್ದ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಭಸ್ಮ ಮಾಡಿದ ಘಟನೆ ಕುಂದಾಪುರದ ಕಾವ್ರಾಡಿ ಬಳಿ ನಡೆದಿದೆ. ಕುಂದಾಪುರ ಕಾವ್ರಾಡಿಯ ನೂರಾನಿ ಮಸೀದಿಯ ಎದುರಿನ ರಸ್ತೆ ಬದಿಯಲ್ಲಿ ಶೇಖ್ ಮೊಹಮ್ಮದ್ ಗೌಸ್ ಎನ್ನುವವರು ಕಾರು ನಿಲ್ಲಿಸಿದ್ದು, ಸದ್ಯ ಸುಟ್ಟು ಭಸ್ಮವಾಗಿದೆ.

ಶೇಖ್ ಮೊಹಮ್ಮದ್ ಗೌಸ್ ಮತ್ತು ಕುಟುಂಬದವರು ಅಕ್ಟೋಬರ್ 1 ರಂದು ಹೈದರಾಬಾದ್ ಪ್ರವಾಸಕ್ಕೆ ಹೋಗುವ ಗಡಿಬಿಡಿಯಲ್ಲಿ ಮೊದಲು 5 ಲಕ್ಷ ರೂಪಾಯಿ ಕೊಟ್ಟು ಸ್ವಿಫ್ಟ್ ಕಾರು ಖರೀದಿಸಿದ್ದರು. ಮನೆಗೆ ಹೋಗುವ ದಾರಿಯ ಸಮಸ್ಯೆ ಇರುವ ಹಿನ್ನಲೆಯಲ್ಲಿ ನೂರಾನಿ ಮಸೀದಿಯ ಎದುರಿಗೆ ಕಾರು ನಿಲ್ಲಿಸಿದ್ದರು. ಅಕ್ಟೋಬರ್ 4 ರಂದು ಮೊಹಮ್ಮದ್ ಗೌಸ್ ಅವರ ತಮ್ಮ ಶೇಕ್ ಅನ್ಸಾರ್ ಸಾಹೇಬ್ ನಮಾಜು ಮಾಡುಲು ಬಂದಾಗ, ಕಾರಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಭಸ್ಮ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಕಾರು ಮಾಲೀಕ ಮಹಮ್ಮದ್ ಗೌಸ್ ಅವರು, ಆರ್ಥಿಕವಾಗಿ ನಷ್ಟ ಉಂಟು ಮಾಡುವ ಉದ್ದೇಶಕ್ಕೆ ರಾತ್ರಿ 1 ಗಂಟೆಯಿಂದ 3 ಗಂಟೆಯ ಮದ್ಯದಲ್ಲಿ ದುಷ್ಕರ್ಮಿಗಳು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಇತ್ತೀಚೆಗೆ ಮನೆಗೆ ಹೋಗುವ ದಾರಿ ವಿಚಾರದಲ್ಲಿ ತಕಾದೆ ತೆಗೆದ ಅಬ್ದುಲ್ ಅಜೀಜ್ ಮತ್ತು ಅವರ ಮಗ ಶೇಖ್ ಅಬ್ದುಲ್ ಫಯಾಜ್, ಅಣ್ಣನ ಮಗಳು ನೇಹಾ ಬೇಗಂ ಎಂಬುವವಳೊಂದಿಗೆ ಹಣದ ವ್ಯವಹಾರದಲ್ಲಿ ಜಗಳ ಮಾಡಿ ತಕರಾರು ಮಾಡಿದ್ದ ಕಂಡ್ಲೂರು ಮುಸೀನ್ ಹಾಗೂ ಸದಾಕತ್ ಎಂಬವರ ಮೇಲೆ ಸಂಶಯವಿರುವುದಾಗಿ ದೂರಿನಲ್ಲಿ ನಮೂದಿಸಿದ್ದಾರೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.