ಉಡುಪಿ : ರಾಜ್ಯ ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೇ ಬಾಕಿ ಉಳಿದಿರುವ ಮದ್ಯದಂಗಡಿ ಸನ್ನದುಗಳ ಇ-ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಬಿಡ್ದಾರರಿಗೆ ತಾಂತ್ರಿಕ ಮಾಹಿತಿ ಹಾಗೂ ಪಾರದರ್ಶಕ ಹರಾಜು ವಿಧಾನಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಹೆಚ್. ಹೇಳಿದರು.

ಅವರು ಮಣಿಪಾಲದ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಐದು ವರ್ಷಗಳ ಮದ್ಯದ ಸನ್ನದುಗಳ ಹರಾಜು ಸಂಬಂಧಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸಕ್ತ ಬಜೆಟ್ನಲ್ಲಿ ಹೆಚ್ಚುವರಿ ಸಂಪನ್ಮೂಲ ಸಂಗ್ರಹದ ಭಾಗವಾಗಿ ರಾಜ್ಯದಾದ್ಯಂತ ಒಟ್ಟು 569 ಸನ್ನದುಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.

ಇ-ಹರಾಜಿಗೆ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಜನವರಿ 13ರಿಂದ 20ರವರೆಗೆ ನೇರ ಹರಾಜು ನಡೆಯಲಿದೆ. ಉಡುಪಿಯಲ್ಲಿ ಜ.20ರಂದು ಮಧ್ಯಾಹ್ನ 3ರಿಂದ 5ರವರೆಗೆ ಹರಾಜು ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಇ-ಹರಾಜು ಕುರಿತು ವಿಸ್ತೃತ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಉಡುಪಿ ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್, ಇಲಾಖೆಯ ಅಧಿಕಾರಿಗಳು ಹಾಗೂ ಉಡುಪಿ–ದಕ್ಷಿಣ ಕನ್ನಡ ಜಿಲ್ಲೆಗಳ ಸಂಭಾವ್ಯ ಬಿಡ್ದಾರರು ಭಾಗವಹಿಸಿದ್ದರು.



