Thursday, October 23, 2025

spot_img

ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ

ಉಡುಪಿ : ಭಗವಾನ್ ಬುದ್ಧರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆದರ್ಶ ಹಾಗೂ ತತ್ವಗಳನ್ನು ಅನುಸರಿಸುವುದರೊಂದಿಗೆ ಅವರ ಜೀವನಚರಿತ್ರೆ ಮತ್ತು ಆಚಾರ ವಿಚಾರಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ಪಾಲಿಸಬೇಕು ಎಂದು ಶಾಸಕ ಯಶ್ಪಾಲ್ ಎ ಸುವರ್ಣ ಹೇಳಿದರು. ಅವರು ಇಂದು ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಜನತಾ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ಬುದ್ಧಿಸ್ಟ್ ಸೊಸೈಟಿ ಆಪ್ ಇಂಡಿಯಾ ಉಡುಪಿ ಇವರ ಸಂಯುಕ್ತ ಆಶ್ರಯಲ್ಲಿ ನಡೆದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬುದ್ಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು. ಮಾನವತಾವಾದಿ ಸಂದೇಶವನ್ನು ಸಾರುವ ಮೂಲಕ ವಿಶ್ವದಲ್ಲೇ ಖ್ಯಾತಿ ಪಡೆದವರು ಭಗವಾನ್ ಬುದ್ಧರು. ಗೌತಮ ಬುದ್ದರ ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ನಮ್ಮ ಯುವ ಪೀಳಿಗೆಯವರು ಪಾಲಿಸುವಂತಾಗಬೇಕು. ಬುದ್ಧನ ಪ್ರಮುಖ ಬೋಧನೆಗಳಲ್ಲಿ ಸಕಲ ಜೀವಿಗಳಿಗೂ ಸಹಾನುಭೂತಿ ತೋರಿಸಬೇಕು, ಸ್ವಾತಂತ್ರ್ಯ ನೀಡಬೇಕು ಎನ್ನುವುದು ಒಂದಾಗಿದೆ. ಬುದ್ಧರ ತತ್ವಗಳು ಜಾತಿ, ವರ್ಣ, ವರ್ಗದ ವಿರುದ್ಧವಾಗಿದ್ದವು. ಸಾಮಾನ್ಯ ಜನರ ಜೊತೆಗೆ ಜೀವನ ನಡೆಸಿದ ಇವರು, ಮಾನವ ದೃಷ್ಠಿಕೋನದಿಂದಲೇ ಜನರ ದುಃಖವನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದರು ಎಂದರು.
ಸರ್ಕಾರದಿಂದ ಹಲವಾರು ಆದರ್ಶ ವ್ಯಕ್ತಿಗಳ, ದಾರ್ಶನಿಕರ ಹಾಗೂ ಶರಣರ ಆದರ್ಶ ತತ್ವಗಳನ್ನು, ಜೀವನಶೈಲಿಯನ್ನು, ಆಚಾರ ವಿಚಾರಗಳನ್ನು ಮತ್ತು ಅವರ ಕಾರ್ಯವೈಖರಿಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಆಚರಣೆ ಮಾಡುತ್ತಾ ಜಯಂತಿ ಕಾರ್ಯಕ್ರಮಗಳಿಗೆ ಅರ್ಥಪೂರ್ಣ ಮಹತ್ವವನ್ನು ತಂದುಕೊಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಭಗವಾನ್ ಬುದ್ಧರು ಆತ್ಮ, ತತ್ವಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದ ಮಹಾನ್ ವ್ಯಕ್ತಿಯಾಗಿದ್ದು, ಅವರ ಜ್ಞಾನಮಾರ್ಗವನ್ನು ಅನುಸರಿಸಿ ನಮ್ಮೊಳಗೆ ಜಾಗೃತಿಯನ್ನು ಮೂಡಿಸಿಕೊಂಡು ಸಮಾಜವನ್ನು ಸುಧಾರಣೆ ಮಾಡುವಲ್ಲಿ ಶ್ರಮಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಬುದ್ಧರ ಕುರಿತಾಗಿ ವಕೀಲರಾದ ಮಂಜುನಾಥ್ ವಿ. ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ, ಮೌಢ್ಯವನ್ನು ನಿರಾಕರಿಸಿ ಸತ್ಯವನ್ನು ಅನುಸರಿಸುವ ಮೂಲಕ ನೇರವಾದ ದೃಷ್ಟಿ ಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಭೋದಿಸಿದ ಗೌತಮ ಬುದ್ದರು, ಸಮಾಜದಲ್ಲಿ ಶಾಂತಿ ಸಹಬಾಳ್ವೆಯ ಜೀವನ ನಿರ್ವಹಣೆಯ ತತ್ವವನ್ನು ಜಗತ್ತಿಗೆ ಸಾರಿದರು ಎಂದರು. ಇದೇ ಸಂದರ್ಭದಲ್ಲಿ ಬುದ್ಧರ ಕುರಿತಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಬುದ್ಧಿಸ್ಟ್ ಸೊಸೈಟಿ ಆಪ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಮಹೇಶ್ ಮಾರ್ಪಳ್ಳಿ
ನಿರೂಪಿಸಿದರೆ, ರಾಘವೇಂದ್ರ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles