ಉಡುಪಿ : ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಬ್ರಹ್ಮಾವರ ತಹಸಿಲ್ದಾರ್ ಕಚೇರಿ ಎದುರು ಸಿಪಿಎಂ ಪಕ್ಷದ ವತಿಯಿಂದ ಪ್ರಚಾರಾಂದೋಲನ ಮತ್ತು ಪ್ರತಿಭಟನೆ ನಡೆಸಲಾಯಿತು. ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸುವುದು ಶಾಸಕರ ಜವಾಬ್ದಾರಿಯಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಗ್ರಹಿಸಿದರು.

ಸಿ ಪಿಎಂ ವಲಯ ಸಮಿತಿ ಕಾರ್ಯದರ್ಶಿ ಶಶಿಧರ್ ಗೊಲ್ಲ ಮಾತನಾಡಿ, ಬ್ರಹ್ಮಾವರ ಇಎಸ್ಐ ಆಸ್ಪತ್ರೆ ಮಂಜೂರಾಗಿ ವರ್ಷಗಳು ಕಳೆದರೂ ಕಾಮಗಾರಿ ಆರಂಭಿಸದಿರುವುದು ಜಿಲ್ಲೆಯ ಸಾವಿರಾರು ಕಾರ್ಮಿಕರಿಗೆ ತೊಂದರೆ ತಂದಿದೆ. ಬ್ರಹ್ಮಾವರ ತಾಲೂಕು ರಚನೆಯಾದರೂ ಹಲವು ವರ್ಷಗಳಿಂದ ತಾಲ್ಲೂಕಿನ ಅಭಿವೃದ್ಧಿ ಕುಂಠಿತಗೊಂಡಿದ್ದು ಜನಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಗ್ಗೆ ಚಿಂತನೆ ವ್ಯಕ್ತಪಡಿಸಿದರು. ತಾಲೂಕು ಆಡಳಿತ ತಕ್ಷಣ ಗಮನ ಹರಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಬ್ರಹ್ಮಾವರ ಇಎಸ್ಐ ಆಸ್ಪತ್ರೆ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು, ಬ್ರಹ್ಮಾವರ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸರ್ಕಾರಿ ಆಸ್ಪತ್ರೆಯಾಗಿ ಪರಿವರ್ತಿಸಬೇಕು, ಮಟಪಾಡಿ–ನೀಲಾವರ ಮಾರ್ಗದಲ್ಲಿ ಸರ್ಕಾರಿ ಬಸ್ಸು ಓಡಿಸಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆ ಸಿಗುವಂತೆ ಮಾಡಬೇಕು, ಬ್ರಹ್ಮಾವರದಲ್ಲಿ ಫ್ಲೈಓವರ್ ನಿರ್ಮಿಸಿ ಸಂಚಾರ ಸುಗಮಗೊಳಿಸಬೇಕು, ಹಂದಾಡಿ ಮತ್ತು ಮಟಪಾಡಿಯಲ್ಲಿ ಮಳೆಗಾಲದ ನಾಶವನ್ನು ತಪ್ಪಿಸಲು ಸರಿಯಾದ ಸಂಕ–ಚರಂಡಿ ನಿರ್ಮಾಣ; ಅವೈಜ್ಞಾನಿಕ ಸಂಕವನ್ನು ಮರುನಿರ್ಮಿಸಬೇಕು, ಬ್ರಹ್ಮಾವರ ಬಸ್ ನಿಲ್ದಾಣವನ್ನು ವಿಸ್ತರಿಸಿ ಸರ್ಕಾರಿ ಜಾಗದಲ್ಲಿ ನಿರ್ಮಿಸಬೇಕು, ಬ್ರಹ್ಮಾವರದಲ್ಲಿ ಕಾರ್ಮಿಕ ನಿರೀಕ್ಷಕರ ಕಚೇರಿ ಮಂಜೂರು ಮಾಡಿ ಖಾಯಂ ನಿರೀಕ್ಷಕರನ್ನು ನೇಮಕ ಮಾಡಬೇಕು, ಬ್ರಹ್ಮಾವರ ಕೃಷಿ ಕಾಲೇಜನ್ನು ಮೇಲ್ದರ್ಜೆಗೆರಿಸಬೇಕು ಎನ್ನುವ ಬೇಡಿಕೆ ಮುಂದಿಡಲಾಯಿತು. ಮನವಿಯನ್ನು ಬ್ರಹ್ಮಾವರ ತಹಸಿಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರುಗಳಾದ ಸುಭಾಶ್ಚಂದ್ರ ನಾಯಕ್, ಕವಿರಾಜ್ ಎಸ್. ಕಾಂಚನ್, ಬ್ರಹ್ಮಾವರ ಶಾಖಾ ಕಾರ್ಯದರ್ಶಿ ರಮೇಶ್ ಪೂಜಾರಿ, ಮುರುಳಿ, ನಳಿನಿ, ಅರವಿಂದ, ಶ್ರೀಧರ ಶೆಟ್ಟಿ, ಕೃಷ್ಣನಂದ ನಾಯಕ್, ಕರುಣಾಕರ, ವೆಂಕಟೇಶ್ ಹಾಗೂ ರಿಕ್ಷಾ ಚಾಲಕರ ಸಂಘದ ಗೌರವಾಧ್ಯಕ್ಷ ರಾಜು ಪೂಜಾರಿ ಉಪಸ್ಥಿತರಿದ್ದರು.



