ಉಡುಪಿ: ಕರ್ನಾಟಕದಲ್ಲಿ ಹವಾಮಾನಾಧರಿತ ಬೆಳೆ ವಿಮೆ ಪಾವತಿಯಲ್ಲಿ ವಿಮಾ ಕಂಪನಿಗಳ ಅನ್ಯಾಯದಿಂದ ರೈತರು ಸಂಕಷ್ಟದಲ್ಲಿರುವುದನ್ನು ಗಮನಿಸಿ, ಉಡುಪಿ–ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

ಸಂಸದ ಕೋಟ ನೀಡಿದ ಮಾಹಿತಿಯ ಪ್ರಕಾರ, ಅಡಿಕೆ, ಕಾಳುಮೆಣಸು ಸೇರಿದಂತೆ ಹವಾಮಾನಾಧರಿತ ಬೆಳೆ ವಿಮೆಗೆ ಸಾವಿರಾರು ರೈತರು ಹಣ ಪಾವತಿಸಿ ನೊಂದಾಯಿಸಿಕೊಂಡಿದ್ದರು. ಆದರೆ ಈಗ ಪರಿಹಾರ ಪಾವತಿಯಲ್ಲಿ ವಿಮಾ ಕಂಪನಿಗಳು ತಾರತಮ್ಯ ಮತ್ತು ಬೇಜವಾಬ್ದಾರಿತನ ತೋರಿರುವುದರಿಂದ ರೈತರು ನಷ್ಟಕ್ಕೆ ಗುರಿಯಾಗಿದ್ದಾರೆ. ಪ್ರತಿ ಗ್ರಾಮ ಪಂಚಾಯತಿಗೆ ಮಳೆಮಾಪಕರು ಅಳವಡಿಸಿದರೂ, ಅವುಗಳ ಅಸಮರ್ಪಕ ನಿರ್ವಹಣೆಯಿಂದ ಮಳೆಯ ಪ್ರಮಾಣ ಸರಿಯಾಗಿ ದಾಖಲಾಗದ ಘಟನೆಗಳು ಅನೇಕ ಸ್ಥಳಗಳಲ್ಲಿ ಕಂಡುಬಂದಿವೆ. ಇದರಿಂದ ಬೆಳೆ ನಷ್ಟವಾದರೂ ದಾಖಲೆಗಳಲ್ಲಿ ಮಳೆಯ ಪ್ರಮಾಣ ತಪ್ಪಾಗಿ ತೋರಿಬಂದಿರುವುದರಿಂದ ರೈತರಿಗೆ ಪರಿಹಾರ ದೊರಕದ ಸ್ಥಿತಿ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 39,507 ರೈತರು ಬೆಳೆ ವಿಮೆಗೆ ಹಣ ಪಾವತಿಸಿದ್ದರೂ, ಅವರಲ್ಲಿ ಕೇವಲ 9,000 ಮಂದಿಗೆ ಮಾತ್ರ ಅತ್ಯಂತ ಕಡಿಮೆ ಮೊತ್ತ ಬಿಡುಗಡೆಗೊಂಡಿದ್ದು, ಕೆಲವು ರೈತರ ಖಾತೆಗೆ ಪಾವತಿಯಾಗಿರುವ ಪರಿಹಾರ ಮೊತ್ತವು ಅವರು ಕಟ್ಟಿದ ವಿಮಾ ಪ್ರೀಮಿಯಂಗಿಂತಲೂ ಕಡಿಮೆ ಇದೆ ಎಂದು ಸಂಸದ ಕೋಟ ಹೇಳಿದ್ದಾರೆ.

ವಿಮಾ ಕಂಪನಿಗಳ ಅಕ್ರಮ ಮತ್ತು ರೈತರಿಗೆ ನ್ಯಾಯ ಸಿಗದಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಾಪಕವಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಂದ ವರದಿ ಪಡೆದು, ವಿಮಾ ವಂಚಿತ ರೈತರಿಗೆ ಸಂಪೂರ್ಣ ಪರಿಹಾರ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕೋಟ ಮನವಿ ಮಾಡಿದ್ದಾರೆ.ಸಂಸದರಿಂದ ಬಂದ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೆಂದು ಕೋಟ ತಿಳಿಸಿದ್ದಾರೆ.



