Monday, March 9, 2026

spot_img

ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಮಾನವೀಯ ನೆಲೆಯಲ್ಲಿ ಅನುಷ್ಠಾನಗೊಳಿಸಿ: ಸ್ವರೂಪ ಟಿ.ಕೆ

ಉಡುಪಿ : ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ಮಾನವೀಯ ಹಾಗೂ ವೈಜ್ಞಾನಿಕ ದೃಷ್ಟಿಕೋನದಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.   ನಗರದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಸಾಮಾನ್ಯರಿಗೆ ಬೀದಿ ನಾಯಿಗಳಿಂದ ಉಂಟಾಗುವ ಉಪಟಳವನ್ನು ತಪ್ಪಿಸಲು ಸರ್ವೋಚ್ಛ ನ್ಯಾಯಾಲಯವು ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಇವುಗಳನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಂಬಂಧಪಟ್ಟ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವುದು, ಎ.ಬಿ.ಸಿ (ಆನಿಮಲ್ ಬರ್ತ್ ಕಂಟ್ರೋಲ್) ಕಾರ್ಯಕ್ರಮಗಳನ್ನು ತೀವ್ರಗೊಳಿಸುವುದು, ರೇಬೀಸ್ ಹರಡುವುದನ್ನು ತಡೆಗಟ್ಟಲು ಲಸಿಕಾ ಕಾರ್ಯಕ್ರಮಗಳನ್ನು ನಡೆಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ಸೂಚಿಸಿದರು.

ಜಿಲ್ಲೆಯ ನಗರ ಪ್ರದೇಶದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಬಸ್ ಮತ್ತು ರೈಲು ನಿಲ್ದಾಣಗಳು, ಆಸ್ಪತ್ರೆಗಳು ಹಾಗೂ ಕ್ರೀಡಾಂಗಣಗಳನ್ನು ಒಳಗೊಂಡು ಒಟ್ಟು 253 ಸಂಸ್ಥೆಗಳ ವ್ಯಾಪ್ತಿಯಲ್ಲಿ 440 ಬೀದಿ ನಾಯಿಗಳನ್ನು ಗುರುತಿಸಲಾಗಿದೆ. ಈ ಸಂಸ್ಥೆಗಳ ಗೇಟ್‌ಗಳ ಮೇಲೆ ಸಂಬಂಧಪಟ್ಟ ನೋಡೆಲ್ ಅಧಿಕಾರಿಗಳ ಹೆಸರು, ಮೊಬೈಲ್ ಸಂಖ್ಯೆ ಹಾಗೂ “ಇಲ್ಲಿ ನಾಯಿಗಳು ಕಂಡಲ್ಲಿ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಿ” ಎಂಬ ಫಲಕಗಳನ್ನು ಅಳವಡಿಸಿರುವ ಕುರಿತು ಜಿ.ಪಿ.ಎಸ್. ಫೋಟೋ ಸಹಿತ ವಿವರಗಳನ್ನು ಎರಡು ದಿನಗಳೊಳಗೆ ಸಲ್ಲಿಸುವಂತೆ ಸೂಚಿಸಿದರು. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ನೇಮಕಗೊಂಡ ನೋಡೆಲ್ ಅಧಿಕಾರಿಗಳ ವಿವರ ನೀಡುವಂತೆ ತಿಳಿಸಿದರು.

ರೇಬೀಸ್ ಸೋಂಕು ಹೊಂದಿರುವ ಅಥವಾ ಸಂಶಯಾಸ್ಪದ ರೋಗ ಪೀಡಿತ ಅಥವಾ ಆಕ್ರಮಣಕಾರಿ ನಡತೆ ಇರುವ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಬಿಡಲು ಪ್ರತೀ ತಾಲೂಕಿನಲ್ಲಿಯೂ ಅಗತ್ಯ ಭೂಮಿಯನ್ನು ಗುರುತಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಅದರಂತೆ ಉಡುಪಿ ನಗರದಲ್ಲಿ 9 ಎಕರೆ, ಕುಂದಾಪುರದ ಕಂದಾವರ ಡಂಪಿಂಗ್ ಯಾರ್ಡ್ ಬಳಿ 1.5 ಎಕರೆ, ಕಾರ್ಕಳದಲ್ಲಿ 1 ಎಕರೆ, ಕಾಪುವಿನ ಶಿರ್ವದಲ್ಲಿ 3 ಎಕರೆ, ಬೈಂದೂರಿನಲ್ಲಿ 1 ಎಕರೆ ಹಾಗೂ ಸಾಲಿಗ್ರಾಮದ ಗಿಳಿಯಾರಿನಲ್ಲಿ 3 ಎಕರೆ ಭೂಮಿ ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಎಸ್‌ಒಪಿ ಅನ್ವಯ ಆಹಾರ, ನೀರು, ನೆರಳು ಹಾಗೂ ಪಶುವೈದ್ಯಕೀಯ ಚಿಕಿತ್ಸೆ ಸೌಲಭ್ಯಗಳನ್ನು ಒಳಗೊಂಡ ಆಶ್ರಯ ತಾಣಗಳನ್ನು ಶೀಘ್ರ ನಿರ್ಮಿಸಿ “ಡಾಗ್ ಶೆಲ್ಟರ್” ಎಂಬ ಫಲಕಗಳನ್ನು ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಆಹಾರ ವಿತರಣೆಗಾಗಿ ನಿಗದಿತ ಸ್ಥಳಗಳನ್ನು ಗುರುತಿಸಬೇಕು. ಆ ಸ್ಥಳಗಳಲ್ಲಿಯೇ ಆಹಾರ ನೀಡಬೇಕು. ಆಹಾರ ವಿತರಣಾ ತಾಣಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡದಂತೆ ಸರ್ವೋಚ್ಛ ನ್ಯಾಯಾಲಯದ ಆದೇಶದಲ್ಲಿ ಸೂಚಿಸಿರುವುದರಿಂದ ಅದರ ಅನುಷ್ಠಾನಕ್ಕೆ ನೋಡೆಲ್ ಅಧಿಕಾರಿಗಳು ಹೊಣೆಗಾರರಾಗಿರುತ್ತಾರೆ ಎಂದು ಹೇಳಿದರು.

ಜಿಲ್ಲೆಯ ನಗರ ಹಾಗೂ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ಸ್ಥಳಾಂತರ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನರಿಂದ ಬಂದ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿ ಸ್ಥಾಪಿಸಿ, ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಸೂಚಿಸಿದರು. ಜಿಲ್ಲೆಯಲ್ಲಿ ಡಾಗ್ ಅಡಾಪ್ಷನ್ ಕುರಿತು ಜಾಗೃತಿ ಮೂಡಿಸಬೇಕು. ಇತರೆ ಕೆಲವು ಜಿಲ್ಲೆಗಳಲ್ಲಿ ಡಾಗ್ ಶೋಗಳನ್ನು ಆಯೋಜಿಸಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳನ್ನು ದತ್ತು ಸ್ವೀಕರಿಸಿರುವ ಉದಾಹರಣೆಗಳಿವೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ದತ್ತು ಸ್ವೀಕರಿಸಿದ ನಾಯಿಗಳ ವಿವರಗಳನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಎಂ.ಸಿ. ರೆಡ್ಡಪ್ಪ, ಪೌರಾಯುಕ್ತ ಮಹಾಂತೇಶ ಹಂಗರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles