ಉಡುಪಿ: ಸಾಮಾಜಿಕ ಪಿಡುಗಾಗಿರುವ ಬಾಲ್ಯವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ಜಾರಿಗೊಳಿಸಲಾದ ಕಾಯಿದೆ ಹಾಗೂ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಪ್ರತಿಯೊಬ್ಬ ಅಧಿಕಾರಿಯ ಆದ್ಯ ಕರ್ತವ್ಯವಾಗಿದ್ದು, ಇದಕ್ಕೆ ಒತ್ತು ನೀಡಬೇಕು ಎಂದು ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ ಹೇಳಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಇವರ ಸಹಯೋಗದಲ್ಲಿ ಬಾಲ್ಯವಿವಾಹ ನಿಷೇಧ ಹಾಗೂ ಮಕ್ಕಳ ಸಂಬಂಧಿತ ಕಾನೂನುಗಳ ಬಗ್ಗೆ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೇನರ್ಸ್ಗಳಿಗೆ ನಡೆಯಲಿರುವ ಎರಡು ದಿನದ ತರಬೇತಿ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಾಲ್ಯ ವಿವಾಹವು ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಅನಿಷ್ಠ ಪದ್ಧತಿಯಾಗಿದ್ದು, ಇದು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಅನಕ್ಷರಸ್ಥ ಪೋಷಕರು ತಮ್ಮ ಜವಾಬ್ದಾರಿಗಳನ್ನು ಕಳೆದುಕೊಳ್ಳಲು, ವಯಸ್ಸಾದ ಹಿರಿಯರು ತಮ್ಮ ಮೊಮ್ಮಕ್ಕಳ ವಿವಾಹವನ್ನು ನೋಡಬೇಕೆಂಬ ಆಸೆ, ಆರ್ಥಿಕ ಮುಗ್ಗಟ್ಟು ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಹಾಗೂ ಆಸೆ-ಆಮಿಷಗಳಿಗೆ ಒಳಗಾಗಿ ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ ಮಾಡಲು ಮುಂದಾಗುತ್ತಿದ್ದರು. ನಾಗರಿಕತೆ ಬೆಳೆದಂತೆ, ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರಸ್ತುತ ಬಾಲ್ಯ ವಿವಾಹದಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಸಮಾಜದಲ್ಲಿ ಸಂಪೂರ್ಣವಾಗಿ ನಿರ್ಮಾಣವಾಗಿಲ್ಲ ಎಂದರು.

ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದುರ್ಬಲರ ಹಾಗೂ ಅಶಕ್ತರ ರಕ್ಷಣೆ ಮಾಡುವುದು ಸರಕಾರದ ಉದ್ದೇಶವಾಗಿದ್ದು, ಮಕ್ಕಳು, ಮಹಿಳೆಯರೂ ಅದರಲ್ಲೂ ಮುಖ್ಯವಾಗಿ ತಾರತಮ್ಯಕ್ಕೆ ಒಳಗಾಗುವ ಹೆಣ್ಣು ಮಕ್ಕಳ ರಕ್ಷಣೆಗೆ ಸರಕಾರದೊಂದಿಗೆ ನಾಗರಿಕ ಸಮಾಜವೂ ಕೈಜೋಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಬದಲಾವಣೆಗೊಂಡ ನೂತನ ಚೈಲ್ಡ್ಲೈನ್ ಲೋಗೋವನ್ನು ಹಾಗೂ ಮಿಷನ್ ವಾತ್ಸಲ್ಯ ಮಾರ್ಗಸೂಚಿ ಅನ್ವಯ ಮಕ್ಕಳ ಸುರಕ್ಷಿತ ಸ್ಪರ್ಶ ಹಾಗೂ ಅಸುರಕ್ಷಿತ ಸ್ಪರ್ಶ ಕುರಿತ ಪೋಸ್ರ‍್ಸ್ಗಳನ್ನು ಬಿಡುಗಡೆಗೊಳಿಸಲಾಯಿತು. ಯುನಿಸೆಫ್ ಪ್ರಾದೇಶಿಕ ಸಂಯೋಜಕರಾದ ಡಾ. ಕೊಣಿಲ ರಾಘವೇಂದ್ರ ಹಾಗೂ ಹರೀಶ್ ಜೋಗಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಖಾದರಳ್ಳಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜೂಹಿ ದಾಮೋದರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಸಿ.ಕೆ, ಮಾಸ್ಟರ್ ಟ್ರೇನರ್ಸ್ಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಸ್ವಾಗತಿಸಿ, ಸುರಕ್ಷಾ ನಿರೂಪಿಸಿ, ವಂದಿಸಿದರು.