ಉಡುಪಿ : ಮೂರು ವರ್ಷಕ್ಕೊಮ್ಮೆ ಆಯೋಜಿಸಲಾಗುವ ಪ್ರಶಿಕ್ಷಣ ಪಾಠಗಳ ಮೂಲಕ ಪಕ್ಷದ ತತ್ವಗಳು ಹಾಗೂ ಸಿದ್ಧಾಂತಗಳನ್ನು ಹಿರಿಯ ಕಾರ್ಯಕರ್ತರೊಂದಿಗೆ ಹೊಸಬರಿಗೆ ಪರಿಚಯಿಸುವ ಉದ್ದೇಶದಿಂದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಪ್ರಶಿಕ್ಷಣ ವರ್ಗವನ್ನು ಬಾರ್ಕೂರಿನ ಸಂಕಮ್ಮ ತಾಯಿ ಸಭಾಭವನದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಪಕ್ಷದ ಕಾರ್ಯಕರ್ತರು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಿ, ಪಕ್ಷದ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಂತಹ ಪ್ರಶಿಕ್ಷಣ ವರ್ಗಗಳು ಸಂಘಟನೆ ಬಲವರ್ಧನೆಗೆ ಸಹಕಾರಿಯಾಗುತ್ತವೆ ಎಂದರು.

ಕುಂದಾಪುರ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ತಳಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಶ್ರಮಿಸುವ ಕಾರ್ಯಕರ್ತರಿಗೆ ಗೌರವ ನೀಡುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷವಾಗಿದ್ದು, ಕಾರ್ಯಕರ್ತರ ಪರಿಶ್ರಮವೇ ಪಕ್ಷದ ಬಲ ಎಂದು ಹೇಳಿದರು.ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಶಿಕ್ಷಣದ ಮಹತ್ವವನ್ನು ವಿವರಿಸಿ, ಕಾರ್ಯಕರ್ತರ ವೈಚಾರಿಕ ಸ್ಪಷ್ಟತೆ ಹಾಗೂ ಸಂಘಟನಾ ಬಲವರ್ಧನೆಗೆ ಇಂತಹ ತರಬೇತಿ ಶಿಬಿರಗಳು ಅಗತ್ಯವೆಂದು ತಿಳಿಸಿದರು.

ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಶಿಕ್ಷಣ ಸಂಯೋಜಕ ಶಂಕರ್ ಅಂಕದಕಟ್ಟೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾಡಿದರು.

ವೇದಿಕೆಯಲ್ಲಿ ರಾಜ್ಯ ಸಹ ಸಂಯೋಜಕ ವಿಕಾಸ್ ಪುತ್ತೂರು, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಪ್ರಶಿಕ್ಷಣ ಸಂಯೋಜಕ ಕಾಪು ಶ್ರೀಕಾಂತ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಶ್ರೀಮತಿ ಲತಾ ಸುರೇಶ್ ಶೆಟ್ಟಿ ಗೋಪಾಡಿ, ಕಿರಣ್ ಪೂಜಾರಿ ತೆಕ್ಕಟ್ಟೆ, ಯುವ ಮೋರ್ಚಾ ಅಧ್ಯಕ್ಷ ಪ್ರೃಥ್ವಿರಾಜ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೂತ್ ಮಟ್ಟದಿಂದ ವಿವಿಧ ಹಂತದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸತೀಶ್ ಪೂಜಾರಿ ವಕ್ವಾಡಿ ನಿರೂಪಿಸಿದರು.



