ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನವೆಂಬರ್ 28ರ ಉಡುಪಿ ಶ್ರೀಕೃಷ್ಣ ಮಠ ಭೇಟಿ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆಯಾಗಿದ್ದು, ಅವರು ಮೂಲ ವೇಳಾಪಟ್ಟಿಗಿಂತ 40 ನಿಮಿಷ ಮುಂಚಿತವಾಗಿ ಆಗಮಿಸುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಮೂಲ ವೇಳಾಪಟ್ಟಿಯಂತೆ ಮೋದಿ ಬೆಳಗ್ಗೆ 11.05ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ 11.25ಕ್ಕೆ ಆದಿಉಡುಪಿ ಹೆಲಿಪ್ಯಾಡ್‌ಗೆ ತಲುಪುವ ಯೋಜನೆ ಇತ್ತು. ಬಳಿಕ ಮಧ್ಯಾಹ್ನ 12 ಗಂಟೆಗೆ ಮಠಕ್ಕೆ ಆಗಮಿಸಬೇಕಿತ್ತು. ಆದರೆ ಇದೀಗ ಹೊಸ ವೇಳಾಪಟ್ಟಿಯ ಪ್ರಕಾರ, ಪ್ರಧಾನಿ ಮೋದಿ ಬೆಳಿಗ್ಗೆ 11 ಗಂಟೆಗೆ ಆದಿಉಡುಪಿಗೆ ಆಗಮಿಸುವ ಸಾಧ್ಯತೆ ಇದೆ. ಆಗಮನದ ನಂತರ ಬೆಳಿಗ್ಗೆ 11.00ರಿಂದ 11.20ರವರೆಗೆ ನಗರದ ಮುಖ್ಯರಸ್ತೆಗಳಲ್ಲಿ ರೋಡ್ ಶೋ ನಡೆಸಲಾಗುತ್ತದೆ. ಪೊಲೀಸರು ಈಗಾಗಲೇ ಮಾರ್ಗಚರ್ಯೆ ಮತ್ತು ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದ್ದಾರೆ.

ಮಠದ ಕಾರ್ಯಕ್ರಮ— ಲಕ್ಷ ಕಂಠ ಗೀತಾ ಪಾರಾಯಣ, ಸುವರ್ಣ ತೀರ್ಥ ಮಂಟಪ ಉದ್ಘಾಟನೆ ಹಾಗೂ ಕನಕನ ಕಿಂಡಿಗೆ ಕನಕ ಕವಚ ಸಮರ್ಪಣೆ—ಮುಗಿದ ನಂತರ ಪ್ರಧಾನಿ ಮಧ್ಯಾಹ್ನ 1 ಗಂಟೆಗೆ ಉಡುಪಿಯಿಂದ ಹೊರಡಲಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಭದ್ರತಾ ಕಾರಣಗಳಿಂದ ಉಡುಪಿಯಲ್ಲಿ ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳ ವ್ಯವಸ್ಥೆಯ ಮಾಹಿತಿಯನ್ನು ಪೊಲೀಸರು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.



