ಉಡುಪಿ: ಯಕ್ಷಗಾನ ಕಲಾರಂಗದಲ್ಲಿ ಆಯೋಜಿಸಲಾದ ಪ್ರಥಮ ಪಿಯುಸಿ ವಿದ್ಯಾಪೋಷಕ್ ವಿದ್ಯಾರ್ಥಿಗಳ ಸನಿವಾಸ ಶಿಬಿರದ ಅಂಗವಾಗಿ ಶಿಬಿರಾರ್ಥಿಗಳು ಸ್ವಚ್ಛತಾ ಅಭಿಯಾನ ಕೈಗೊಂಡರು. ಶಿಬಿರದ ಕೊನೆಯ ದಿನದಂದು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅವರ ನೇತೃತ್ವದಲ್ಲಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಅಶೋಕ್ ಎಂ. ಅವರ ಸಂಯೋಜನೆಯಲ್ಲಿ ಅಭಿಯಾನ ನಡೆಯಿತು.

ಮಂಜುನಾಥ ಹೆಬ್ಬಾರ್ ಅವರ ಸಹಕಾರದೊಂದಿಗೆ ಸಂಸ್ಥೆಯ ಕಾರ್ಯಕರ್ತರು ಮತ್ತು ಶಿಬಿರಾರ್ಥಿಗಳು ಶಾರದಾ ಮಂಟಪದಿಂದ ಬೀಡಿನಗುಡ್ಡೆವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.

ಒಟ್ಟು 243 ಶಿಬಿರಾರ್ಥಿಗಳು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಸಮಾಜದಲ್ಲಿ ಪರಿಸರ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದು ಮತ್ತು ವಿದ್ಯಾರ್ಥಿಗಳಿಗೆ ತ್ಯಾಜ್ಯ ವಿಲೇವಾರಿಯ ಕುರಿತು ಸ್ಪಷ್ಟ ಅರಿವು ನೀಡುವುದು ಅಭಿಯಾನದ ಉದ್ದೇಶವಾಗಿತ್ತು. ಕಾರ್ಯಾಚರಣೆಯಲ್ಲಿ ಸುಮಾರು 50 ಚೀಲಗಳಷ್ಟು ಕಸವನ್ನು ಸಂಗ್ರಹಿಸಲಾಯಿತು.



