ಉಡುಪಿ : ಗೃಹರಕ್ಷಕದಳವು ಪೊಲೀಸ್ ಇಲಾಖೆಗೆ ಸರಿಸಮನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕೊರೋನಾ ಕಾಲದಲ್ಲಿ ಗೃಹರಕ್ಷಕದಳದ ಕಾರ್ಯವೈಖರಿಯು ಜನರಿಂದ ಮೆಚ್ಚುಗೆ ಪಡೆದಿದೆ. ಗೃಹರಕ್ಷಕದಳದ ಸಿಬ್ಬಂದಿಗಳು ಪೊಲೀಸರ ಮಾದರಿಯಲ್ಲೇ ಸೇವೆ ನೀಡಿ ದೇಶದಲ್ಲಿ ಹೆಸರುವಾಸಿಯಾಗಿದ್ದು ಗೃಹರಕ್ಷಕದಳದ ಸೇವೆ ಅನನ್ಯವಾಗಿದೆ ಎಂದು ಜಿಲ್ಲಾ ಪೋಲಿಸ್ ಅಧೀಕ್ಷಕ ಹರಿರಾಂ ಶಂಕರ್ ಹೇಳಿದರು.

ಅವರು ಇಂದು ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅತಿ ಹೆಚ್ಚು ಜನಸಂದಣಿ ಸೇರುವ ಕಾರ್ಯಕ್ರಮಗಳಲ್ಲಿ ಗೃಹರಕ್ಷಕದಳವು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. ವಾಹನ ಸಂಚಾರದ

ನಿಭಾವಣೆಯಲ್ಲಿ ಪೊಲೀಸರಿಗಿಂತಲೂ ಒಂದು ಹೆಜ್ಜೆ ಮುಂದಿದ್ದು ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿ ಖುದ್ದು ಜನರೇ ಗೃಹರಕ್ಷಕರನ್ನು ನಿಯುಕ್ತಿಗೊಳಿಸುವಂತೆ ಕೇಳಿಕೊಳ್ಳುವ ಉದಾಹರಣೆಗಳಿವೆ. ಇದು ಗೃಹರಕ್ಷಕರ ಕರ್ತವ್ಯ ಬದ್ದತೆಗೆ ಹಿಡಿದ ಕೈಗನ್ನಡಿಯಾಗಿದೆ. ವಯಸ್ಸಿನ ಬೇಧವಿಲ್ಲದೆ ಗೃಹರಕ್ಷಕರದಳವು ಹಲವು ಜನರಿಗೆ ಬದುಕು ಕಟ್ಟಿಕೊಟ್ಟಿದೆ ಎಂದು ಅವರು ಹೇಳಿದರು..

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸಮಾಜದಲ್ಲಿ ತುರ್ತು ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಗೃಹ ರಕ್ಷಕರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಕ್ರೀಡೆಯಿಂದ ದೈಹಿಕವಾಗಿ ಸದೃಢವಾದ ಆರೋಗ್ಯ ಹೊಂದಬಹುದಾಗಿದೆ ಹಾಗೂ ಸಂಘಟಿತರಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಮಾದೇಷ್ಟ ಡಾ. ರೋಶನ್ ಕುಮಾರ್ ಶೆಟ್ಟಿ, ಅಥ್ಲೆಟಿಕ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಹರಿಪ್ರಸಾದ್ ರೈ, ವಿವಿಧ ಜಿಲ್ಲೆಗಳ ಸಮಾದೇಷ್ಟರು ಉಪಸ್ಥಿತರಿದ್ದರು. ಜಿಲ್ಲಾ ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಸ್ವಾಗತಿಸಿ, ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ. ವಂದಿಸಿ, ಬ್ರಹ್ಮಾವರ ಘಟಕದ ಪಿಎಲ್ಸಿ ಸ್ಟೀವನ್ ಪ್ರಕಾಶ್ ನಿರೂಪಿಸಿದರು.



