ಉಡುಪಿ: ವಿಶ್ವಕಪ್ ಪಂದ್ಯಾಟಗಳಿಗೂ ಮುನ್ನ ಹಾಗೂ ಪಂದ್ಯಾವಳಿಯ ನಡುವೆಯೂ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಉಡುಪಿಯ ಪೇಜಾವರ ಮಠದ ಶ್ರೀಗಳ ಆಶೀರ್ವಾದ ಪಡೆದಿದ್ದ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.

ಮುಂಬಯಿಯಲ್ಲಿ ವಿಶ್ವಕಪ್ ಸರಣಿಗೆ ತೆರಳುವ ಮುನ್ನ ಸೂರ್ಯಕುಮಾರ್ ಯಾದವ್ ಅವರು ತಮ್ಮ ಗುರುಗಳಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದು ತೆರಳಿದ್ದರು. ವಿಶ್ವಕಪ್ ಗೆಲುವಿನ ಬಳಿಕ ಈ ಆಶೀರ್ವಾದ ಫಲಿಸಿದೆ ಎಂದು ಭಕ್ತರು ಹೇಳುತ್ತಿದ್ದಾರೆ.

ಅಷ್ಟೇ ಅಲ್ಲದೆ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ವಿಶ್ವಕಪ್ ಜಯಕ್ಕಾಗಿ ಮುಂಬೈ ಪೇಜಾವರ ಮಠಕ್ಕೆ ಖುದ್ದಾಗಿ ಭೇಟಿ ನೀಡಿದ ಅವರು ಸತ್ಯನಾರಾಯಣ ಪೂಜೆ ನೆರವೇರಿಸಿದ್ದರು ಎಂದು ತಿಳಿದುಬಂದಿದೆ. ದೇವರ ಪ್ರಾರ್ಥನೆ ಹಾಗೂ ಪುರುಷ ಪ್ರಯತ್ನ ಎರಡೂ ಒಂದಾಗಿ ಇಂದು ಫಲ ನೀಡಿದ್ದು, ಕೋಟ್ಯಂತರ ಭಾರತೀಯರಿಗೆ ಸಂತಸ ತಂದಿದೆ ಎಂದು ಹೇಳಲಾಗುತ್ತಿದೆ.

ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನವರಾಗಿದ್ದು, ಕರಾವಳಿ ಜಿಲ್ಲೆಗಳೊಂದಿಗೆ ಅವರಿಗೆ ಅವಿನಾಭಾವ ಸಂಬಂಧವಿದೆ.



