ಉಡುಪಿ: ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಹೆಸರಿನಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅನುಗ್ರಹಪೂರ್ವಕವಾಗಿ ನೀಡುವ ‘ಯಕ್ಷವಿದ್ಯಾಮಾನ್ಯ’ ಪ್ರಶಸ್ತಿಗೆ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರನ್ನು ಆಯ್ಕೆ ಮಾಡಲಾಗಿದೆ.

ಧರ್ಮಸ್ಥಳ ಮೇಳದಲ್ಲಿ 34 ವರ್ಷ ಹಾಗೂ ಕದ್ರಿ ಮೇಳದಲ್ಲಿ 6 ವರ್ಷ ಭಾಗವತರಾಗಿ ಸೇವೆ ಸಲ್ಲಿಸಿರುವ ರಘುರಾಮ ಹೊಳ್ಳ ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಪ್ರಸಿದ್ಧ ಭಾಗವತರಾದ ಪುತ್ತಿಗೆ ರಾಮಕೃಷ್ಣ ಜೋಯಿಸ್ ಅವರ ಪುತ್ರರಾಗಿರುವ ಅವರು ತಂದೆಯವರಿಂದಲೇ ಆರಂಭಿಕ ತರಬೇತಿ ಪಡೆದಿದ್ದಾರೆ. ಬಳಿಕ ಕಡತೋಕ ಮಂಜುನಾಥ ಭಾಗವತರ ಪ್ರೇರಣೆಯಿಂದ ತಮ್ಮ ವಿಶಿಷ್ಟ ಕಂಠಸಿರಿಯ ಮೂಲಕ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಂಡೆ ಮತ್ತು ಮದ್ದಲೆ ವಾದನದಲ್ಲೂ ಅವರು ಪರಿಣತಿ ಹೊಂದಿದ್ದಾರೆ.

ಈ ಪ್ರಶಸ್ತಿಯನ್ನು ಎಪ್ರಿಲ್ 2, 2026ರಂದು ಗುರುವಾರ ಪೂರ್ವಾಹ್ನ 10.30ಕ್ಕೆ ಪಲಿಮಾರಿನಲ್ಲಿ ನಡೆಯಲಿರುವ ಶ್ರೀ ಹನುಮಜ್ಜಯಂತಿ ಮಹೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಫಲಕ ಹಾಗೂ ₹50,000 ನಗದು ಬಹುಮಾನ ಸಹಿತವಾಗಿ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



