ಉಡುಪಿ : ಉಡುಪಿ ನಗರದಲ್ಲಿ ಕಟ್ಟಡ ನಿಯಮಾವಳಿಗಳನ್ನು ಪಾಲಿಸದೆ ಪಾರ್ಕಿಂಗ್ಗೆ ಅಗತ್ಯ ಜಾಗ ಮೀಸಲಿಡದೇ ಸಂಚಾರ ದಟ್ಟಣೆಗೆ ಕಾರಣವಾಗುತ್ತಿರುವ 58 ಕಟ್ಟಡಗಳಿಗೆ ನಗರಸಭೆ ನೋಟಿಸ್ ಜಾರಿಗೊಳಿಸಿದೆ. ಕಾನೂನುಬಾಹಿರ ಕಟ್ಟಡ ನಿರ್ಮಾಣ, ಪಾರ್ಕಿಂಗ್ ಸೌಲಭ್ಯದ ಕೊರತೆ ಹಾಗೂ ವರ್ಷೇನು ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದು ನಗರದಲ್ಲಿ ದಿನನಿತ್ಯ ಸಂಚಾರ ಸಮಸ್ಯೆಗೆ ಕಾರಣವಾಗುತ್ತಿದೆ. ನಗರ ಭಾಗದಲ್ಲಿ 30–40 ವರ್ಷಗಳ ಹಿಂದೆ ನಿರ್ಮಾಣವಾದ ಕೆಲ ಕಟ್ಟಡಗಳು ಅನುಮತಿ ಸಂದರ್ಭದಲ್ಲಿ ಪಾರ್ಕಿಂಗ್ ಜಾಗ ತೋರಿಸಿದರೂ, ಬಳಿಕ ಆ ಜಾಗವನ್ನು ಅಂಗಡಿ ವಿಸ್ತರಣೆ ಅಥವಾ ಉಪಗುತ್ತಿಗೆಗೆ ಬಳಸಿರುವುದು ಪತ್ತೆಯಾಗಿದೆ. ಇದರ ಪರಿಣಾಮ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಹೆಚ್ಚಾಗಿ ಪಾದಚಾರಿಗಳು ಹಾಗೂ ವಾಹನ ಸವಾರರು ತೀವ್ರ ಅಸೌಕರ್ಯ ಎದುರಿಸುತ್ತಿದ್ದಾರೆ.

ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಕಿದಿಯೂರು ಹೋಟೆಲ್ ಮುಂಭಾಗ, ಸಿಟಿ ಬಸ್ ನಿಲ್ದಾಣದ ಸುತ್ತಮುತ್ತ, ತ್ರಿವೇಣಿ ಜಂಕ್ಷನ್, ಕೆಎಂ ಮಾರ್ಗ, ರಾಜಾಜಿ ಕ್ರಾಸ್ ರಸ್ತೆ ಹಾಗೂ ಕೋರ್ಟ್ ರಸ್ತೆಯ ಬಳಿಯ ಹಲವಾರು ಕಟ್ಟಡಗಳಿಗೆ ನೋಟಿಸ್ ಜಾರಿಯಾಗಿದೆ. ಕೆಲವರು ಈಗಾಗಲೇ ಹೆಚ್ಚುವರಿ ತೆರಿಗೆ ಪಾವತಿಸಿರುವುದೂ ತಿಳಿದುಬಂದಿದೆ.

ಪ್ರವಾಸಿಗರ ಸಂಖ್ಯೆ ಹಾಗೂ ವಾಹನ ನೋಂದಣಿ ಹೆಚ್ಚುತ್ತಿದ್ದರೂ ನಗರದ ರಸ್ತೆ ವಿನ್ಯಾಸ ಹಳೆಯದಾಗಿಯೇ ಉಳಿದಿರುವುದು ಸಮಸ್ಯೆಯನ್ನು ಗಂಭೀರಗೊಳಿಸಿದೆ. ಪಾರ್ಕಿಂಗ್ ವ್ಯವಸ್ಥೆಗೆ ನಗರಸಭೆಯಲ್ಲಿಯೂ ಸಾಕಷ್ಟು ಜಾಗದ ಕೊರತೆ ಇದೆ. ಹಳೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಪ್ರಸ್ತಾವನೆ ಇದ್ದರೂ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಪೊಲೀಸ್ ವರದಿ ಆಧರಿಸಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳಿಗೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಪೌರಾಯುಕ್ತ ಮಹಾಂತೇಶ್ ಹಂಗರಗಿ ತಿಳಿಸಿದ್ದಾರೆ.



